ತುಮಕೂರು: ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದ ಸರ್ವೆ ನಂಬರ್ 113 ರಲ್ಲಿ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿದು ಹಾಕಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಮಾರ್ಚ್19 ರಂದು ಜಿಲ್ಲೆಗೆ ಆಗಮಿಸಲಿರುವ ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ರಾಕೇಶ್ ಕುಮಾರ್, ಸರ್ಕಾರಕ್ಕೆ ಪ್ರಾದೇಶಿಕ ಆಯುಕ್ತರ ಮೂಲಕ ವರದಿ ಸಲ್ಲಿಸಬೇಕಾದ ಅಗತ್ಯವಿದೆ. ಹೀಗಾಗಿ ಮಾರ್ಚ್ 19 ರಂದು ಆಗಮಿಸಲಿರುವ ಪ್ರಾದೇಶಿಕ ಆಯುಕ್ತರು ಸಭೆ ನಡೆಸಿ, ಅವಶ್ಯಕತೆ ಬಿದ್ದರೆ ಸ್ಥಳ ಪರಿಶೀಲನೆ ಕೂಡ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಮರಗಳನ್ನು ಕಡಿದಿರುವುದಕ್ಕೆ ಸಂಬಂಧಪಟ್ಟಂತೆ ಗ್ರಾಮ ಲೆಕ್ಕಾಧಿಕಾರಿ ಮತ್ತು ತಹಶೀಲ್ದಾರ್ ಅವರ ಪಾತ್ರವೇನು? ಎಂಬ ಕುರಿತಂತೆ ಈಗಾಗಲೇ ಉಪವಿಭಾಗಾಧಿಕಾರಿಗಳು ವರದಿಯಲ್ಲಿ ದಾಖಲಿಸಿದ್ದಾರೆ ಎಂದರು.