ತುಮಕೂರು : ಅಂಗನವಾಡಿ ಕೇಂದ್ರಕ್ಕೆ ತಮ್ಮ ಸಮುದಾಯದವರನ್ನೇ ನಿಯೋಜಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿರುವ ಘಟನೆ ಕುಣಿಗಲ್ ತಾಲೂಕಿನ ಬೊಮ್ಮೇನಹಳ್ಳಿ ಪಾಳ್ಯದಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ನವೆಂಬರ್‌ನಲ್ಲಿ ಅನ್ಯ ಸಮುದಾಯದ ಮಹಿಳೆಯನ್ನು ಅಂಗನವಾಡಿ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಸರ್ಕಾರದ ನೀತಿ,ನಿಯಮಾವಳಿ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯನ್ನು ಅಲ್ಲಿಗೆ ನಿಯೋಜನೆ ಮಾಡಲಾಗಿದೆ.
ಹೀಗಿದ್ದರೂ ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದವರು ತಮ್ಮದೇ ಸಮುದಾಯದ ಅಂಗನವಾಡಿ ಕಾರ್ಯಕರ್ತೆಯನ್ನ ನಿಯೋಜನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಅಂಗನವಾಡಿ ಕೇಂದ್ರ ಬೀಗ ತೆರವುಗೊಳಿಸಲಾಗಿತ್ತು. ನಂತರ ಅಲ್ಪಸಂಖ್ಯಾತ ಸಮುದಾಯದ ಜನರು ಗ್ರಾಮದಲ್ಲಿ ಸಭೆ ಸೇರಿ ಸಮೀಪದಲ್ಲೇ ಇರುವ ಹಳೆ ಕಟ್ಟಡದಲ್ಲಿ ಬಾಲವಾಡಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ.
ಹೀಗಾಗಿ, ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇಲ್ಲದೆ ಬಿಕೋ ಎನ್ನುತ್ತಿದೆ. ನಿತ್ಯ ಅಂಗನವಾಡಿ ಕಾರ್ಯಕರ್ತೆ ಮಾತ್ರ ಅಂಗನವಾಡಿ ಕೇಂದ್ರದ ಬಾಗಿಲು ತೆಗೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ, ನಾವು ಒತ್ತಾಯಪೂರ್ವಕವಾಗಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುವಂತೆ ಕೇಳಲು ಸಾಧ್ಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ತುಮಕೂರಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗೆ ಕೊರೊನಾ ದೃಢ.. 7 ದಿನ ಶಾಲೆಗೆ ರಜೆ ಘೋಷಣೆ