ತುಮಕೂರು: ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ತಗುಲಿದ ಬಳೀಕ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಸಾಕಷ್ಟು ರಕ್ತದ ಕೊರತೆ ಎದುರಾಗಿತ್ತು. ಹೊಂದಿಕೆ ಆಗುವ ಗುಂಪಿನ ರಕ್ತ ಸಿಗದೇ ಗರ್ಭಿಣಿಯರು ಸೇರಿದಂತೆ ಅನೇಕರು ಮೃತಪಟ್ಟರು. ಸೋಂಕಿನ ಭೀತಿಯಲ್ಲಿ ರಕ್ತ ಸಂಗ್ರಹಿಸಲು ಸಾಧ್ಯವಾಗದಿದ್ದುದೇ ಇದಕ್ಕೆ ಕಾರಣವಾಗಿತ್ತು.
ಹೀಗಾಗಿ ಕೋವಿಡ್ನ ಸಂಭಾವ್ಯ ಮೂರನೇ ಅಲೆ ವೇಳೆ ರಕ್ತದ ಕೊರತೆ ಎದುರಾಗದಂತೆ ಒಂದೆಡೆ ತುಮಕೂರು ಜಿಲ್ಲಾಡಳಿತ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಿದೆ. ವಿವಿಧ ಸಂಘ ಸಂಸ್ತೆಗಳೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಆದರೂ ಸೋಂಕು ಹರಡುವಿಕೆ ಭೀತಿಯಿಂದ ರಕ್ತದಾನ ಮಾಡಲು ನಿರೀಕ್ಷೆಯಂತೆ ಮುಂದೆ ಬರುತ್ತಿಲ್ಲ. ಹೀಗಾಗಿ ಜಿಲ್ಲಾ ಪೊಲಿಸ್ ಇಲಾಖೆ ರಕ್ತದಾನ ಶಿಬಿರ ನಡೆಸಲು ನಿರ್ಧರಿಸಿದ್ದು, ಪೊಲೀಸ್ ಸಿಬ್ಬಂದಿಯೂ ರಕ್ತದಾನ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ: 2000 ಯೂನಿಟ್ ರಕ್ತ ಸಂಗ್ರಹಿಸಲು ಮುಂದಾದ ಸಂಘ ಸಂಸ್ಥೆಗಳು
ಆಗಸ್ಟ್ 27ರಂದು ಶಿಬಿರ ಆಯೋಜಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಮೊದಲು ರಕ್ತದಾನ ಮಾಡಲಿದ್ದಾರೆ. ಪೊಲೀಸರೇ ರಕ್ತದಾನ ಮಾಡುತ್ತಿದ್ದಾರೆ ಎಂದು ವಿವಿಧ ಸಂಘ ಸಂಸ್ಥೆಗಳು, ಕಂಪನಿಗಳೂ ಸಹ ಶಿಬಿರ ಆಯೋಜನೆ ಮಾಡಬಹುದು, ರಕ್ತದಾನ ಮಾಡಲು ಮುಂದಾಗಬಹುದು. ಈ ಮೂಲಕ ರಕ್ತದ ಅಭಾವ ನೀಗಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ತಿಳಿಸಿದ್ದಾರೆ.