ತುಮಕೂರು : ಪ್ರೀತಿಯಲ್ಲಿ ಬಿದ್ದು ಪರಾರಿಯಾಗಿದ್ದ ಇಬ್ಬರು ಅಪ್ರಾಪ್ತೆಯರು ಮತ್ತು ಓರ್ವ ಬಾಲಕ, ಓರ್ವ ಯುವಕನನ್ನು ಜಿಲ್ಲೆಯ ಕೋಳಾಲ ಪೊಲೀಸರು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಪತ್ತೆ ಹಚ್ಚಿದ್ದಾರೆ.
ಮೂಲತಃ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಮಾವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಇಬ್ಬರು ಅಪ್ರಾಪ್ತೆಯರು ರಾಮನಗರ ಜಿಲ್ಲೆಯ ಯುವಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಲಕನ ಜೊತೆ ಓಡಿ ಹೋಗಿದ್ದರು. ಶವಸಂಸ್ಕಾರ ಕಾರ್ಯಕ್ಕೆ ಬಂದ ಸಂದರ್ಭದಲ್ಲಿ ಪೋಷಕರ ಕಣ್ಣು ತಪ್ಪಿಸಿ ಪರಾರಿಯಾಗಿದ್ದರು.
ಶಿವಮೊಗ್ಗ ನಗರದ ಮಾಣಿಕ್ಯ ಎಂಬುವರ ಕುಟುಂಬ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗರೆಯ ಸಂಬಂಧಿಕರ ಶವ ಸಂಸ್ಕಾರಕ್ಕೆ ಬಂದಿತ್ತು. 16 ವರ್ಷದ ಬಾಲಕಿ ರಾಮನಗರ ಜಿಲ್ಲೆಯ ಕುದೂರಿನ ಶಿವಗಂಗೆಯ ಯುವಕ ಸುಧಾಕರ ಹಾಗೂ ಕೊರಟಗೆರೆ ತಾಲೂಕು ಮದ್ಯವೆಂಕಟಪುರ ಗ್ರಾಮದ 14 ವರ್ಷದ ಬಾಲಕಿ, ದಾಬಸ್ ಪೇಟೆಯ ಸೋಂಪುರ ಹೋಬಳಿಯ 17 ವರ್ಷದ ಬಾಲಕನ ಜೊತೆ ಓಡಿ ಹೋಗಿದ್ದರು. ಈ ಸಂಬಂಧ ಪೋಷಕರು ಕೋಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಡ್ರಗ್ಸ್ ಆರೋಪಿ ಜೊತೆ ನಿರಂತರ ಸಂಪರ್ಕ ; ಹೆಡ್ ಕಾನ್‌ಸ್ಟೇಬಲ್ ಸಸ್ಪೆಂಡ್
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಳಾಲ ಪೊಲೀಸ್ ಠಾಣೆ ಸಿಬ್ಬಂದಿ ತಂಡ ರಚಿಸಿ ಬುಧವಾರ ನಾಲ್ವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ