ತುಮಕೂರು: ಆಕೆ 12 ವರ್ಷದ ಬಾಲಕಿ, ಜೀವನದಲ್ಲಿ ಏನಾದರೊಂದು ಸಾಧಿಸಿಬೇಕು ಎಂಬ ಹಂಬಲ, ಛಲ ಹೊಂದಿದ್ದಾಳೆ. ಹಾಗಾಗಿ ಸುಮಾರು 4 ಸಾವಿರ ಮಾಸ್ಕ್ಗಳನ್ನು ತಯಾರಿಸಿ ತನ್ನ ಹುಟ್ಟುಹಬ್ಬದಂದು ಉಚಿತವಾಗಿ ಜನರಿಗೆ ಹಂಚುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಗ್ರಾಮದ ಬಾಲಕಿ ವೈಷ್ಣವಿ, ಕೋವಿಡ್ ನಿಯಂತ್ರಣಕ್ಕಾಗಿ ತನ್ನಿಂದ ಏನಾದರೊಂದು ಪುಟ್ಟ ಕೊಡುಗೆ ಸಮಾಜಕ್ಕೆ ಕೊಡಬೇಕು ಎಂದು ಯೋಚಿಸಿ ಉಚಿತವಾಗಿ ಮಾಸ್ಕ್ ವಿತರಿಸಿದ್ದಾಳೆ. ಸುಮಾರು ನಾಲ್ಕು ಸಾವಿರ ಬಟ್ಟೆ ಮಾಸ್ಕ್ ತಾನೇ ತಯಾರಿಸಿ ತನ್ನ ಹುಟ್ಟು ಹಬ್ಬದಂದು ಸಾರ್ವಜನಿಕರಿಗೆ ಹಂಚಿದ್ದಾಳೆ.
ಪುರವರ ಹೋಬಳಿ ಆಸ್ಪತ್ರೆ, ಬ್ಯಾಂಕ್, ಪೊಲೀಸ್ ಠಾಣೆ, ಹಲವೆಡೆ ಓಡಾಡಿ ಕೋವಿಡ್ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ್ ವಿತರಿಸಿದ್ದಾಳೆ.
ಬಾಲಕಿ ತಂದೆ ರಾಮಚಂದ್ರಪ್ಪ ಹಾಗೂ ತಾಯಿ ಶ್ರೀದೇವಿ ನೆರವಿನಿಂದ ಟೈಲರಿಂಗ್ ಕಲಿತ ವೈಷ್ಣವಿ, ಸ್ವತಃ ತಾನೇ ಮಾಸ್ಕ್ ತಯಾರಿಸಿದ್ದಾಳೆ. ಕಳೆದ ಒಂದು ತಿಂಗಳಿಂದ ಇದಕ್ಕಾಗಿ ಶ್ರಮಿಸಿದ್ದಾಳೆ. ಜೊತೆಗೆ ಈ ಬಾಲೆಯ ನೆರವಿಗೆ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದೆ.
ಕೊರೊನಾ ಭಯದಲ್ಲಿ ಅದೆಷ್ಟೋ ಮಕ್ಕಳು ಮನೆಯಲ್ಲಿ ಮೋಬೈಲ್, ಟೀವಿ ನೊಡೊದ್ರಲ್ಲಿ ಬ್ಯುಸಿಯಾಗಿದ್ರೆ, ಈ ಮಕ್ಕಳು ಮಾತ್ರ ತಾವು ಜನರಿಗೆ ಏನಾದರೂ ಸಹಾಯವಾಗುವಂತೆ ಮಾಸ್ಕ್ ತಯಾರಿಸಿ ನೀಡುವ ಮೂಲಕ ಮಾದರಿಯಾಗಿದ್ದಾರೆ.