ತುಮಕೂರು : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣ ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿರುವಂತಹುದು. ತದನಂತರ 2 ಸಾವಿರ ಕೋಟಿ ರೂ. ಆಸ್ತಿ ಕಬಳಿಸಿದ್ದಾರೆ ಎಂಬ ಆಪಾದನೆ ಬಂದ ಮೇಲೆ ಅದಕ್ಕೆ ಉತ್ತರ ಕೊಡಬೇಕಾಗಿರುವುದು ಅವರ ಜವಾಬ್ದಾರಿಯಾಗಿದೆ. ಯಾರೇ ತಪ್ಪು ಮಾಡಿದ್ರೂ ಇಡಿ ವಿಚಾರಣೆ ಎದುರಿಸಬೇಕಾಗಿರುವುದು ಒಂದು ಪ್ರಕ್ರಿಯೆಯಾಗಿದೆ ಎಂದು ರಾಜ್ಯಸಭೆ ಸದಸ್ಯ, ಚಿತ್ರನಟ ಜಗ್ಗೇಶ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಜಡೆಮಾಯಸಂದ್ರ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಯಾವುದೇ ರಾಜಕೀಯ ವಿಚಾರವಿಲ್ಲದಂತಾಗಿದೆ. ಯಾಕೆಂದರೆ, ಅಭಿವೃದ್ಧಿ ವಿಚಾರದಲ್ಲಿ ಮೋದಿಯವರಿಂದ ಹಿಡಿದು, ಅವರಿಂದ ಮಾರ್ಗದರ್ಶನ ಪಡೆದ ಎಲ್ಲ ರಾಜ್ಯ ಸರ್ಕಾರಗಳು ಬಹಳ ಅದ್ಭುತವಾಗಿ ಕೆಲಸ ಮಾಡುತ್ತಿವೆ. ಈ ವರ್ಷ ಚುನಾವಣಾ ವರ್ಷವಾಗಿದ್ದು, ಇಡಿ ವಿಚಾರಣೆ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕೆಂದಿದ್ದಾರೆ. ಆದರೆ, ಅವರಿಗೆ ಗೆಲುವು ಸಿಗುವುದಿಲ್ಲ ಎಂದು ಹೇಳಿದರು.
ರಾಜ್ಯದ ಜನ ಪ್ರಜ್ಞಾವಂತರಾಗಿದ್ದಾರೆ. ಹಿಂದೆ ಒಂದು ಕಾಲ ಇತ್ತು, ಹೇಳಿದ್ದೆಲ್ಲವನ್ನೂ ನಂಬುವಂತಹದ್ದಾಗಿತ್ತು. ಆದರೆ, ಈಗ ಜನ ಎಲ್ಲಾ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಸಕ್ರಿಯವಾಗಿದ್ದಾರೆ. ಪ್ರತಿಯೊಂದು ವಿಷಯವನ್ನೂ ತುಲನೆ ಮಾಡಿ ನಂತರವೇ ನಂಬುತ್ತಾರೆ. ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ : ಕೇಂದ್ರದ ಯೋಜನೆಗಳ ವಿರುದ್ಧ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು: ಸಿಎಂಗೆ ನಡ್ಡಾ ಸಲಹೆ