ತುಮಕೂರು: ಗೌರಿ-ಗಣೇಶ ಹಬ್ಬ ಎಂದರೆ ಎಲ್ಲರೂ ಮನೆ, ರಸ್ತೆ ಬದಿಗಳಲ್ಲಿ ಕೂರಿಸಿ ಸಡಗರ ಸಂಭ್ರಮದಿಂದ ಆಚರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಗಣಪತಿ ಮೂರ್ತಿಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಹಬ್ಬಕ್ಕೂ ಮುನ್ನಾ ದಿನ ಇಲ್ಲಿ ಆಚರಿಸಿದ್ದಾರೆ.
ನಗರದ ಬಟವಾಡಿ ಬಳಿಯಿರುವ ಚೇತನ ವಿದ್ಯಾಮಂದಿರಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು 200ಕ್ಕೂ ಅಧಿಕ ವಿವಿಧ ಮಾದರಿಯ ಗಣಪತಿ ಮೂರ್ತಿಗಳನ್ನು ತಯಾರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಲ್ಲ ಮೂರ್ತಿಗಳನ್ನು ಮಣ್ಣಿನ ಮೂಲಕವೇ ತಯಾರಿಸಿರುವ ವಿದ್ಯಾರ್ಥಿಗಳು ಅದ್ಭುತವಾಗಿ ಬಣ್ಣ ಬಳಿದಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರಕಲಾ ಶಿಕ್ಷಕಿ ವಿಶಾಲಾ ಮಾತನಾಡಿ, ಮೂರು ವರ್ಷಗಳಿಂದ ಶಾಲೆಯಲ್ಲಿ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳೇ ಗಣೇಶನನ್ನು ತಯಾರಿಸಿ ಶಾಲೆಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಹಲವು ಗಿಡಗಳ ಬೀಜಗಳನ್ನು ಹಾಕಿ ಮೂರ್ತಿಗಳನ್ನು ತಯಾರಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಸಹಕಾರಿ ಎಂದು ಹೇಳಿದರು.
ಪರಿಸರ ಪ್ರೇಮಿ ಗಣಪಗಳನ್ನು ನಾವೇ ತಯಾರಿಸಿದ್ದೇವೆ. ಪರಿಸರವನ್ನು ಸ್ವಚ್ಛವಾಗಿ ಮತ್ತು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.