ತುಮಕೂರು: ಮೇರುನಟ ಡಾ. ರಾಜ್‌ಕುಮಾರ್ ಪುತ್ರ ಪುನೀತ್ ರಾಜ್‌ಕುಮಾರ್ ಅಪ್ಪನ ಸರಳ ಸಜ್ಜನಿಕೆಯ ಗುಣಗಳನ್ನು ಮೈಗೂಡಿಸಿಕೊಂಡು ಬಂದಿದ್ದರು. ಅಂದಿಗೂ ಇಂದಿಗೂ ಅಪ್ಪು ಅಪ್ಪುವಾಗಿಯೇ ಉಳಿದಿದ್ದರು ಎಂದು ಡಾ. ರಾಜ್ ಕುಟುಂಬದ ಸ್ನೇಹಿತ ಸಾಹಿತಿ ತಿಪಟೂರು ರಾಮಸ್ವಾಮಿ ಹೇಳಿದರು.
ಇಂದು ಪುನೀತ್ ಬಾರದ ಲೋಕಕ್ಕೆ ಹೋಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಡಾ.ರಾಜ್‌ಕುಮಾರ್ ಅವರ ಕುಟುಂಬ ಸ್ನೇಹಿತ ತಿಪಟೂರು ರಾಮಸ್ವಾಮಿ ಕಂಬನಿ ಮಿಡಿದರು.


ಶುಕ್ರವಾರ ಬೆಳಗ್ಗೆಯಿಂದಲೂ ನನ್ನ ಮನಸ್ಸಿನಲ್ಲಿ ಅವ್ಯಕ್ತ ತಳಮಳ ಉಂಟಾಗಿತ್ತು. ಕೆಲ ವೈಯಕ್ತಿಕ ಕೆಲಸಗಳಿಗಾಗಿ ಹೊರಗೆ ಹೋಗಲು ಸಹ ಆಗದಂತಹ ಸಂಕಟ. ಸುಮಾರು 10.30 ರ ವೇಳೆಗೆ ಮೊಬೈಲ್ನಲ್ಲಿ ಪುನೀತ್ ರಾಜ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಅವರ ಸಾವಿನ ಸುದ್ದಿಯನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಾಹಿತಿ ರಾಮಸ್ವಾಮಿಯವರು ನೋವು ತೋಡಿಕೊಂಡರು.



ರಾಜ್‌ಕುಮಾರ ಸ್ನೇಹ ಎಂತಹದು ಎಂಬುದು ಇಡೀ ನಾಡಿಗೆ ತಿಳಿದಿದೆ. ಹಲವಾರು ಪ್ರಶಸ್ತಿಗಳು ಅರಸಿ ಬಂದು, ಉನ್ನತ ಸ್ಥಾನದಲ್ಲಿದ್ದರೂ ಸ್ನೇಹವನ್ನು ಮಾತ್ರ ಮರೆಯದಂತಹ ಗೆಳೆಯರಿದ್ದರೆ ಅದು ಡಾ.ರಾಜ್‌ಕುಮಾರ್ ಮಾತ್ರ. ನಾನು ಮತ್ತು ರಾಜ್ ಒಂದು ರೀತಿ ಗಳಸ್ಯಕಂಟಸ್ಯ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ವೇಳೆಯಲ್ಲಿ ಸಂಸಾರ ಸಮೇತರಾಗಿ ತಿಪಟೂರಿಗೆ ಬಂದು ಹೋಗುತ್ತಿದ್ದರು ಎಂದು ಗೆಳೆಯನನ್ನು ರಾಮಸ್ವಾಮಿ ಸ್ಮರಿಸಿದರು.
