ತುಮಕೂರು : ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರವನ್ನು ಕೆಡವಲು ಡ್ರಗ್ಸ್ ಮಾಫಿಯಾದ ಹಣವನ್ನು ಬಳಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಮಲ ಪಾಳಯದ ಮೇಲೆ ಆರೋಪಿಸಿದ್ದಾರೆ.
ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಡ್ರಗ್ಸ್ ಮಾಫಿಯಾದಿಂದ ಬಂದ ಹಣವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಳಕೆ ಮಾಡಲಾಗಿತ್ತು ಎಂದರು.
ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇವತ್ತಿನ ವ್ಯವಸ್ಥೆ ಸರಿ ಇಲ್ಲ, ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಹೇಳಿದರು. ನಾನು ಕೂಡ ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ಆದರೆ, ನನ್ನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮಾಫಿಯಾ ಗಮನಕ್ಕೆ ಬಂದಿರಲಿಲ್ಲ ಎಂದರು.
ಶಿರಾ ವಿಧಾನಸಭಾ ಉಪಚುನಾವಣೆ ಎದುರಿಸಲು ಜೆಡಿಎಸ್ ಸರ್ವಸನ್ನದ್ಧವಾಗಿದೆ. ಮೊದಲಿನಿಂದಲೂ ಶಿರಾ ಜೆಡಿಎಸ್ ಭದ್ರ ಕೋಟೆಯಾಗಿದೆ. ಟಿಕೇಟ್ ಯಾರಿಗೆ ಕೊಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಮೃತ ಶಾಸಕ ಸತ್ಯನಾರಾಯಣ ಅವರ ಕುಟುಂಬಕ್ಕೆ ಟಿಕೇಟ್ ನೀಡುವುದು ಮೊದಲ ಆದ್ಯತೆಯಾಗಿದೆ. ಕಾರ್ಯಕರ್ತರ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಅರ್ಧಕ್ಕೆ ನಿಂತ ಪ್ರತಿಭಟನೆ: ತುರುವೇಕೆರೆ ಪಟ್ಟಣದಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆ ಹೆಚ್‌ಡಿಕೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನು ಅರ್ಧಕ್ಕೆ ಕೈಬಿಡಲಾಯಿತು. ಪ್ರವಾಸಿಮಂದಿರದಲ್ಲಿ ತಹಶೀಲ್ದಾರ್ ನಹೀಮ್ ಉನ್ನೀಸ್ ಅವರಿಗೆ ಹೆಚ್ ಡಿ ಕುಮಾರಸ್ವಾಮಿ ಮನವಿ ಪತ್ರ ಸಲ್ಲಿಸಿದರು.