ತುಮಕೂರು : ತ್ರಿವಿಧ ದಾಸೋಹ ಖ್ಯಾತಿಯ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದ ಮೂಲೆ ಮೂಲೆಯಿಂದ ಬಂದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವೇಶಕ್ಕೆ ಮುಂದಾಗಿದ್ದಾರೆ. ಕೋವಿಡ್ ಪರಿಣಾಮದಿಂದಾಗಿ ಈ ಬಾರಿ ಸಿದ್ದಗಂಗಾ ಮಠದ ಶಾಲೆಗೆ ಪ್ರವೇಶಾತಿ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶ್ರೀಮಠ ವಿದ್ಯಾರ್ಥಿಗಳ ಜಾತ್ರೆಯಂತೆ ಕಂಗೊಳಿಸುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸಿದ್ದಗಂಗಾ ಮಠದ ಶಾಲೆಗಳ ಪ್ರವೇಶಾತಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಶ್ರೀಮಠದಲ್ಲಿ ಪ್ರವೇಶಾತಿ ಪಡೆಯಲು ಅರ್ಜಿ ಹಿಡಿದು ಬರುತ್ತಿದ್ದಾರೆ. ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿ ತುಳುಕುತ್ತಿದೆ. ಕೋವಿಡ್ ಎಫೆಕ್ಟ್ನಿಂದಾಗಿ ಉಚಿತ ಶಿಕ್ಷಣ ಪಡೆಯಲು ಬಯಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕೋವಿಡ್ನಿಂದ ಉಂಟಾದ ಆರ್ಥಿಕ ಸಂಕಷ್ಟ ಇನ್ನೂ ಚೇತರಿಕೆ ಕಂಡಿಲ್ಲ. ಹಾಗಾಗಿ, ಪೋಷಕರು ತಮ್ಮ ಮಕ್ಕಳನ್ನು ಶ್ರೀಮಠದಲ್ಲಿ ಓದಿಸಲು ಮುಂದಾಗುತಿದ್ದಾರೆ. ಕಳೆದ ಎರಡು ವರ್ಷ ಕೊರೊನಾ ಇದ್ದ ಹಿನ್ನೆಲೆ ಹೆಚ್ಚಿನ ಪೋಷಕರು ಮಠದಲ್ಲಿ ಮಕ್ಕಳನ್ನು ಓದಿಸಲು ಮುಂದಾಗಿರಲಿಲ್ಲ. ಈ ವರ್ಷ ಕೋವಿಡ್ ತಗ್ಗಿದ ಪರಿಣಾಮ ಪಾಲಕರು ತಮ್ಮ ಮಕ್ಕಳನ್ನು ಮಠದ ಶಾಲೆಗೆ ಸೇರಿಸುತ್ತಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಈಗಾಗಲೇ ಸುಮಾರು 11 ಸಾವಿರ ಪ್ರವೇಶಾತಿ ಅರ್ಜಿಯನ್ನು ವಿತರಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಗೆ ಅರ್ಜಿಗಳು ಬಂದಿವೆ. ಅರ್ಜಿ ಕೊಡುವುದನ್ನು ನಿಲ್ಲಿಸಲಾಗಿದೆ. ಆದರೂ ಅರ್ಜಿ ಕೇಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ, ಇರುವ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟು ಹೊಸ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಮಾಡಿಕೊಳ್ಳಬೇಕಾಗಿದೆ.
ಹಾಗಾಗಿ, ಸ್ಥಳ ಮತ್ತು ಮೂಲಸೌಕರ್ಯದ ಕೊರತೆ ಉಂಟಾಗಬಹುದು. ಒಟ್ಟು 10 ಸಾವಿರ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಸೌಕರ್ಯ ಇದೆ. ಅದಕ್ಕೂ ಮೀರಿ ಇನ್ನೂ 1 ಸಾವಿರ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯಬಹುದು. ಕೋವಿಡ್ ಸಂಕಷ್ಟದ ಹಿನ್ನೆಲೆ ಒಂದಿಷ್ಟು ಹೆಚ್ಚಿಗೆ ಮಕ್ಕಳನ್ನು ಸೇರಿಸಿಕೊಂಡು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಶ್ರೀಮಠದ ಆಡಳಿತ ಮಂಡಳಿ ಚಿಂತಿಸಿದೆ.
ರಾಯಚೂರು, ಬೀದರ್, ಕಲಬುರ್ಗಿಗಳಿಂದಲೂ ಪೋಷಕರು ಬಂದು ಪ್ರವೇಶಾತಿಗಾಗಿ ಕಾಯುತ್ತಿದ್ದಾರೆ. ಕೇವಲ 300 ರೂ. ಶುಲ್ಕ ಕಟ್ಟಿದರೆ ಸಾಕು ಉಚಿತ ಊಟ, ವಸತಿಯೊಂದಿಗೆ ಸಂಸ್ಕಾರಯುಕ್ತ ಶಿಕ್ಷಣ ಶ್ರೀಮಠದಲ್ಲಿ ಸಿಗುತ್ತದೆ. ಆ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಸಿದ್ದಗಂಗಾ ಮಠದಲ್ಲಿ ಓದಿಸಲು ಪೋಷಕರು ಮುಗಿ ಬಿದ್ದಿದಾರೆ. ಕೋವಿಡ್ ಸಂಕಷ್ಟ ಗಮನದಲ್ಲಿಟ್ಟುಕೊಂಡು ಮಠದ ಆಡಳಿತ ಮಂಡಳಿ ಕೂಡ ಈ ವರ್ಷ ಒಂದಿಷ್ಟು ಹೆಚ್ಚು ಮಕ್ಕಳಿಗೆ ಪ್ರವೇಶ ನೀಡಲು ಮನಸ್ಸು ಮಾಡಿರುವುದು ಶ್ಲಾಘನಾರ್ಹ.
ಇದನ್ನೂ ಓದಿ: 'ತಲೆಗೆ ಪಿಸ್ತೂಲಿಟ್ಟು ಬಾಡಿಗೆಗಿದ್ದ ಯುವತಿ ಮೇಲೆ ಅತ್ಯಾಚಾರ': ಬೆಂಗಳೂರಿನಲ್ಲಿ ಮನೆ ಮಾಲೀಕ ಅರೆಸ್ಟ್