ತುಮಕೂರು: 108 ಮಾದರಿಯಲ್ಲಿ ಪಶುಗಳಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಆ್ಯಂಬುಲೆನ್ಸ್ ಸೌಕರ್ಯ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 108 ಮಾದರಿಯಲ್ಲಿ ಪಶುಗಳಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಆ್ಯಂಬುಲೆನ್ಸ್ ಸೌಕರ್ಯ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಾರಂಭದ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗುವುದು. ತದನಂತರ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.
ಪಶುಗಳು ಕಸಾಯಿಖಾನೆಗೆ ಹೋಗುವುದನ್ನ ತಪ್ಪಿಸಲು ಪಶು ಕಲ್ಯಾಣ ಮಂಡಳಿಯನ್ನ ಸ್ಥಾಪಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ಜೊತೆ ಅನೇಕ ಬಾರಿ ಚರ್ಚೆ ನಡೆಸಲಾಗಿದೆ. ಪ್ರತಿ ತಾಲೂಕಿನಲ್ಲಿಯೂ ಪ್ರಾಣಿಗಳ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯನ್ನ ಸ್ಥಾಪಿಸಲಾಗುವುದು. ಪಶುವೈದ್ಯಾಧಿಕಾರಿಗಳು ಪ್ರತಿ ಹಳ್ಳಿಗೂ ಭೇಟಿ ನೀಡಿ, ಪಶುಗಳಿಗೆ ಚಿಕಿತ್ಸೆ ನೀಡಬೇಕು.
ಚಿಕಿತ್ಸೆ ನೀಡದಿದ್ದರೆ ಮೊದಲ ಬಾರಿಗೆ ವಾರ್ನ್ ಮಾಡಲಾಗುವುದು. ಎರಡನೇ ಬಾರಿಯೂ ಅದನ್ನೇ ಮುಂದುವರೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಪಶು ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 8,500 ಹುದ್ದೆಗಳು ಖಾಲಿಯಿದ್ದು, ನೇಮಕ ಮಾಡಲಾಗುತ್ತಿದೆ ಎಂದರು.