ತುಮಕೂರು : ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಡೆ ನಾವು ಹೆಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಸಿಂದಗಿ ಹಾಗೂ ಹಾನಗಲ್ನಲ್ಲಿ ಜೆಡಿಎಸ್ ಪಕ್ಷದ ಸುಮಾರು 40 ಸಾವಿರ ಮತಗಳು ಚದುರಿ ಹೋಗದೆ ಹಾಗೆಯೇ ಉಳಿದುಕೊಂಡಿವೆ.
ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಜೆಡಿಎಸ್ ಪಕ್ಷವೇ ನಮ್ಮ ಎದುರಾಳಿಯಾಗಿ ಹೊರ ಹೊಮ್ಮುತ್ತಿತ್ತು. ಈ ಹಿಂದೆ ಆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದ ಹಿನ್ನೆಲೆಯಲ್ಲಿ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಜಿಲ್ಲೆಯ ಪಕ್ಷ ರಾಜಕಾರಣದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಮಾಜಿ ಶಾಸಕ ಸುರೇಶ ಗೌಡರಿಗೆ ನಾನು ಅಡಚಣೆ ಉಂಟು ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.
ಪಕ್ಷ ಬೆಳೆಸುವ ನಿಟ್ಟಿನಲ್ಲಿ ಅವರು ಹೇಳಿದರೆ ಅದಕ್ಕೆ ನಾನು ಸಹಕಾರ ಮಾಡುತ್ತೇನೆ. ಅವರು ಬೇರೊಂದು ಪಕ್ಷದ ಮುಖಂಡರೊಂದಿಗೆ ಮಾತನಾಡುವಂತೆ ಸೂಚಿಸಿದರೆ ನಾನು ಮಾತನಾಡುತ್ತೇನೆ ಎಂದರು.
ಸಂಭ್ರಮದ ರಾಜ್ಯೋತ್ಸವ : ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿಇಒ ವಿದ್ಯಾ ಕುಮಾರಿ, ಎಸ್‌ಪಿ ರಾಹುಲ್ ಕುಮಾರ್ ಶಹಪುರ್‌ವಾಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.