ತುಮಕೂರು: ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದುಕೊಂಡಿದ್ದೇನೆ. ಅದಕ್ಕೆಲ್ಲಾ ತಯಾರಿಯಾಗಿದ್ದೀವಿ. ನನಗೂ ಇಂಟೆಲಿಜನ್ಸ್ ಮಾಹಿತಿ ಬಂದಿದೆ. ದಾಳಿ ಮಾಡಿದರೂ ನನಗೇನು ತೊಂದರೆ ಇಲ್ಲ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಐಟಿ ದಾಳಿ ಮಾಡಿದರೆ ಅದಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಕಾರಣ. ಬೇಕಾದರೆ ದೇವೇಗೌಡರೇ ನನ್ನ ವಿರುದ್ಧ ಪತ್ರ ಬರೆದಿರ್ತಾರೆ. ಏನು ಕೆಲಸ ಇರಲ್ಲವಲ್ಲಾ, ಅದಕ್ಕೆ ಕೂತ್ಕೊಂಡು ಬರೆದಿರ್ತಾರೆ. ಆಗ ದೇವೇಗೌಡರ ಆಸ್ತಿಯನ್ನು ತನಿಖೆ ಮಾಡುವಂತೆ ನಾನೂ ಒತ್ತಾಯಿಸುತ್ತೇನೆ. ಕುಟುಂಬದ ಎಲ್ಲವನ್ನೂ ತನಿಖೆ ಮಾಡಲು ಪತ್ರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾಪ ರಮೇಶ ತುಂಬಾ ಒಳ್ಳೆಯ ಹುಡುಗ. ಹಿಂದೆ ಎಸ್ ಎಂ ಕೃಷ್ಣ, ಡಿ ಕೆ ಶಿವಕುಮಾರ್ ಬಳಿ ಕೆಲಸ ಮಾಡಿದ್ದ. ಈಗ ಪರಮೇಶ್ವರ್ ಬಳಿಯಿದ್ದ. ರಮೇಶ್ ಧೈರ್ಯವಾಗಿರಬೇಕಿತ್ತು. ಅದನ್ನ ಬಿಟ್ಟು ಸಾಯುವ ತೀರ್ಮಾನ ಕೈಗೊಂಡಿದ್ದು ತಪ್ಪು ಎಂದು ವಿಷಾದ ವ್ಯಕ್ತಪಡಿಸಿದರು.
ಐಟಿ ಅವರೇನು ಸಾಯಿಸಲು ಬಂದಿರಲಿಲ್ಲ. ಅವರ ಕೆಲಸ ಮಾಡಿದ್ರು ಅಷ್ಟೇ.. ಐಟಿ ಕಿರುಕುಳದಿಂದ ಸಾವನ್ನಪ್ಪಿದ ಎಂದು ನಾನೇನು ಹೇಳಲ್ಲ. ತಪ್ಪು ಮಾಡಿದವರ ಮೇಲೆ ಐಟಿ ದಾಳಿ ನಡೆಸುತ್ತದೆ. ಐಟಿ ದೃಷ್ಟಿಯಲ್ಲಿ ನಾನು ತಪ್ಪು ಮಾಡಿರಬಹುದು. ಆದರೆ, ಜನರ ದೃಷ್ಟಿಯಲ್ಲಿ ತಪ್ಪು ಮಾಡಿಲ್ಲ ಎಂದರು.
ಎಲ್ಲ ಮೆಡಿಕಲ್ ಕಾಲೇಜಿನವರದ್ದೂ ಹಾಗೇನೇ ಇವನೊಬ್ಬನೇ ಏನಲ್ಲಾ. ಇವನು ಮಾಡಬಾರದ್ದೇನೂ ಮಾಡಿಲ್ಲಾ. ಇವನ ಗ್ರಹಚಾರ ಸರಿಯಿಲ್ಲ, ಸಿಕ್ಹಾಕೊಂಡಿದ್ದಾನೆ. ಮಹಾರಾಷ್ಟ್ರ ಚುನಾವಣೆಗೆ ಹಣ ರವಾನೆ ವಿಚಾರಕ್ಕೆ ಸಂಬಂಧಿಸಿದಂತೆ ನಾನೇನು ಹೇಳಲ್ಲ. ಇದ್ದರೂ ಇರಬಹುದು. ಇಲ್ಲದೆಯೂ ಇರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೆಲ ನೀಟ್ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ ಅನ್ನೋ ಮಾಹಿತಿ ಇದೆ. ಆ ಹಿನ್ನೆಲೆಯಲ್ಲೂ ದಾಳಿ ಆಗಿರಬಹುದು ಎಂದರು.