ತುಮಕೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಸನದ ಗೊರೂರಿನ ಹೇಮಾವತಿ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇನ್ನೊಂದೆಡೆ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ನಾಲೆಗಳಿಗೆ ಪೂರಕವಾಗಿರುವ ನೀರು ಹರಿಬಿಡಲಾಗುತ್ತಿದೆ.
ಇಂದು ಬೆಳಗ್ಗೆ ಗೊರೂರಿನ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಬಾಗೂರು ನವಿಲೆ ಸುರಂಗ ಮಾರ್ಗದ ಮೂಲಕ ತುಮಕೂರು ಜಿಲ್ಲೆಯ ಹೇಮಾವತಿ ನಾಲೆಗೆ ನೀರು ಹರಿದು ಬಂದಿದೆ. ಜಿಲ್ಲೆಗೆ ನಿಗದಿಯಾಗಿರುವ ನಾಲೆಗಳಿಗೆ 25 ದಿನಗಳ ಕಾಲ 2,500 ಕ್ಯೂಸೆಕ್ ನೀರು ಹರಿಸಲು ಯೋಜನೆ ರೂಪಿಕೊಳ್ಳಲಾಗಿದ್ದು, ಈ ಮೂಲಕ ಜಿಲ್ಲೆಯ ಕೆರೆಗಳು, ಅಣೆಕಟ್ಟೆಗಳನ್ನು ತುಂಬಿಸಲಾಗುತ್ತದೆ ಎಂದು ಹೇಮಾವತಿ ಜಲಾಶಯದ ಅಧಿಕಾರಿ ವೆಂಕಟರಮಣಪ್ಪ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2920.93 ಅಡಿಗಳಿದ್ದು, ಪ್ರಸ್ತುತ 2899.77 ಅಡಿಗಳಷ್ಟು ನೀರು ಸಂಗ್ರಹವಾಗಿದೆ.