ತುಮಕೂರು: ರಾಜ್ಯದ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಈ ಬಾರಿ ಭರಪೂರ ಮಳೆಯಾಗಿದೆ. ಇದರಿಂದ ಜಿಲ್ಲೆಯ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನಾಲೆಗಳ ಮೂಲಕ ಶಿರಾ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿರಾ ಶಾಸಕ ಡಾ.ರಾಜೇಶ್ ಗೌಡ, ಹೇಮಾವತಿ ನದಿಯ 0.89 ಟಿಎಂಸಿ ನೀರನ್ನು ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗಳಿಗೆ ಹರಿಸಲಾಗುತ್ತಿದೆ. ಅನೇಕ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಹೇಮಾವತಿ ನೀರು ಶಿರಾ ತಾಲೂಕಿಗೆ ಸಿಕ್ಕಿದೆ. ಕಳ್ಳಂಬೆಳ್ಳ ಕೆರೆ ತುಂಬಿದ ನಂತರ ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳಲಾಗುವುದು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಮದಲೂರು ಕೆರೆಗೆ ನೀರು ಹರಿಸಲಾಗಿತ್ತು. ಈ ಬಾರಿಯೂ ಮದಲೂರು ಕೆರೆಗೆ ನೀರು ಹರಿಸುವ ಕುರಿತ ಸರ್ಕಾರದ ನಿಲುವು ಅಚಲವಾಗಿರುತ್ತದೆ. ಅಲ್ಲದೇ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2009ರಲ್ಲಿಯೇ ಈ ಕೆರೆಗೆ ಭೇಟಿ ನೀಡಿ, ಹೇಮಾವತಿ ನೀರು ಹರಿಸುವ ಕುರಿತಂತೆ ಪರಿಶೀಲನೆ ನಡೆಸಿದ್ದರು. ಹೀಗಾಗಿ, ಕಳ್ಳಂಬೆಳ್ಳ ಕೆರೆ ತುಂಬಿದ ನಂತರ ಮದಲೂರು ಕೆರೆಗೆ ನೀರು ಹರಿಯುವುದು ನಿಶ್ಚಿತ ಎಂದರು.
ಇದನ್ನೂ ಓದಿ: Haveri: ಸಿಎಂ ಸ್ವಕ್ಷೇತ್ರದಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ರೈತರ ಸಾವು