ತುಮಕೂರು: ಕುರಿಗಾಹಿಗೆ ಕೊರೊನಾ ಸೋಂಕು ತಗುಲಿದ್ದು, ಆತ ಮೇಯಿಸುತ್ತಿದ್ದ ಕುರಿಗಳಿಗೂ ಸೋಂಕು ತಗುಲಿರುವ ಅನುಮಾನದ ಹಿನ್ನೆಲೆಯಲ್ಲಿ ಕುರಿಗಳ ಗಂಟಲು ದ್ರವದ ಮಾದರಿಯನ್ನು ತೆಗೆಯಲಾಯಿತು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕುರಿಗಾಹಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆ ಈಗಾಗಲೇ 47 ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಮತ್ತು ವೈದ್ಯರ ತಂಡ ಕುರಿಗಳ ಗಂಟಲು ದ್ರವದ ಮಾದರಿಯನ್ನು ಇಂದು ಸಂಗ್ರಹಿಸಿದರು. ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿರುವಂತೆ ಭೋಪಾಲ್ನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಮಾದರಿಯನ್ನು ಕಳುಹಿಸಿಕೊಡಲಾಗುತ್ತಿದೆ.
ಸದ್ಯ ಎಲ್ಲಾ ಕುರಿಗಳನ್ನು ಜಕ್ಕೇನಳ್ಳಿಯಲ್ಲಿ ಒಂದೆಡೆ ಕ್ವಾರಂಟೈನ್ ಮಾಡಲಾಗಿದೆ. ಈ ನಡುವೆ ಸ್ಥಳಕ್ಕೆ ತೆರಳಿದ್ದ ಪಶುಪಾಲನಾ ಇಲಾಖೆಯ ಅಧಿಕಾರಿಗಳೊಂದಿಗೆ ಕುರಿಗಾಹಿಗಳು ಮಾತಿನ ಚಕಮಕಿ ನಡೆಸಿದ ಘಟನೆ ಕೂಡ ನಡೆಯಿತು. ನಂತರ ಅವರನ್ನು ಮನವೊಲಿಸಿದ ಅಧಿಕಾರಿಗಳು, ಕುರಿಗಳ ಗಂಟಲು ದ್ರವದ ಮಾದರಿಯನ್ನು ತೆಗೆದರು.