ತುಮಕೂರು: ಕೇಂದ್ರ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಧ್ಯಂತರ ಹಣ ಬಿಡುಗಡೆ ಮಾಡಿರುವುದು ಭಿಕ್ಷಾ ರೂಪದ ನೆರವು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ನೆರೆ ಸಂತ್ರಸ್ತರಿಗೆ ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂಬುದು ತಿಳಿಯುತಿಲ್ಲ. ನೆರೆಯಿಂದಾಗಿ ರಾಜ್ಯದಲ್ಲಿ ಸುಮಾರು 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ, ಆದರೆ ಕೇಂದ್ರ ಸರ್ಕಾರ ಪುಡಿಗಾಸು ಪರಿಹಾರ ನೀಡಿದೆ. ರಾಜ್ಯದಲ್ಲಿ 25 ಮಂದಿ ಸಂಸದರಿದ್ದಾರೆ, ಅವರು ಮೋದಿಯವರಿಂದ ಎಂಪಿಗಳಾಗಿದ್ದಾರೋ ಅಥವಾ ಜನರಿಂದ ಆಯ್ಕೆಯಾಗಿ ಎಂಪಿಗಳಾಗಿದ್ದಾರೋ ತಿಳಿಯುತಿಲ್ಲ. ಅವರ ನಿರಾಸಕ್ತಿ, ಗಡಸುತನವಿಲ್ಲದ ವರ್ತನೆಯಿಂದ ನೆರೆ ಸಂತ್ರಸ್ತರ ಬದುಕು ಬೀದಿಗೆ ಬಂದಿದೆ ಎಂದು ದೂರಿದರು.
ಪ್ರವಾಹ ಪೀಡಿತ ಮತ್ತು ಅಕಾಲಿಕ ಮಳೆ ಪ್ರದೇಶಕ್ಕೆ ಹಾಗೂ ಬರನಿರ್ವಹಣೆಗೆ ನೆರವು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ನಿರ್ಲಕ್ಷ ಧೋರಣೆ ತಾಳಿರುವ ಸರ್ಕಾರಗಳ ಗಮನ ಸೆಳೆಯಲು ಅಕ್ಟೋಬರ್ 14ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂತ್ರಸ್ತರ ಬಹಿರಂಗ ಅಧಿವೇಶನ ಆಯೋಜಿಸಲಾಗಿದೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಜಿಲ್ಲೆಯಲ್ಲಿ ಹಿಂದೆಯಿದ್ದ ಜನಪ್ರತಿನಿಧಿಗಳು ಹಾಗೂ ಪ್ರಸ್ತುತ ಇರುವವರು ಜಿಲ್ಲೆಗೆ ಹೇಮಾವತಿ ನೀರು ತರುವಲ್ಲಿ ವಿಫಲರಾಗಿದ್ದಾರೆ, ನಿಜವಾಗಿಯೂ ನೀರು ಕೊಡುವ ಇಚ್ಛೆಯಿದ್ದರೆ ನಾಲೆ ಅಗಲೀಕರಣ ಮಾಡಬೇಕು, ಆಗ ಮಾತ್ರ ನಮ್ಮ ಪಾಲಿನ ನೀರು ಹರಿಯಲಿದೆ ಮತ್ತು ನಾಲೆ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬಲಿವೆ ಎಂದು ತಿಳಿಸಿದರು.