ತುಮಕೂರು : ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರನ್ನು ಮುಗಿಸಿ ಪಕ್ಷ ಸಂಘಟನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಪಕ್ಷ ಕಟ್ಟುವ ಕೆಲಸಕ್ಕಿಂತ ಪಕ್ಷವನ್ನು ನಿರ್ನಾಮಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಲೋಕಸಭಾ ಸಂಸದರಾಗಿದ್ದ ನನಗೆ ಮುಂದೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ್, ಇದುವರೆಗೆ ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ. ಅಂದು ಮಾಜಿ ಪ್ರಧಾನಿ ದೇವೇಗೌಡರಿಗೆ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು ಎಂದು ತಿಳಿಸಿದರು.
ಸ್ವತಃ ದೇವೇಗೌಡರು ಹೇಳಿರುವ ಪ್ರಕಾರ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಒಂದು ಟಿಕೆಟ್ ನೀಡಲಿಲ್ಲ. ಅಲ್ಲದೇ, ನನ್ನನ್ನು ಬಲವಂತವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಕರೆದುಕೊಂಡು ಬಂದು ಕಣಕ್ಕಿಳಿಸಿದ್ದರು ಎಂದು ದೇವೇಗೌಡರೇ ಹೇಳಿದ್ದಾರೆ.
ಎರಡು ಬಾರಿ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ ನಡೆದಿದೆ. ಈ ಬಾರಿಯೂ ಕೂಡ ನನ್ನ ಹೆಸರನ್ನು ಪರಿಗಣಿಸದೆ ಪಕ್ಷದ ಹೈಕಮಾಂಡ್ ನನಗೆ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.