ತುಮಕೂರು: ನಗರದ ಶ್ರೀ ಕೃಷ್ಣರಾಜೇಂದ್ರ ಗ್ರಂಥಾಲಯದಲ್ಲಿ ಪೂರಕ ಸೌಲಭ್ಯ ಕಲ್ಪಿಸದಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಮಾಜಿ ಮೇಯರ್ ಫರೀದಾ ಬೇಗಂ ಆರೋಪಿಸಿದ್ದಾರೆ.
ನಿನ್ನೆ ಗ್ರಂಥಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಮೇಯರ್ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದೇನೆ. ಆದರೆ ಮಾಜಿ ಮೇಯರ್ ಆದ ನಂತರ ಸ್ಫರ್ಧಾಕಾಂಕ್ಷಿಗಳಿಗೆ ಒದಗಿಸಲಾಗಿದ್ದ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಸ್ಪರ್ಧಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಂಥಾಲಯದ ಅಧಿಕಾರಿಗಳು ಮುಂದಿನ 15 ದಿನಗಳೊಳಗಾಗಿ ಅಗತ್ಯ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.