ತುಮಕೂರು: ಕೋವಿಡ್ ನಂತರ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನೀಡುತ್ತಿದ್ದ ಬಿಸಿಯೂಟ ವ್ಯವಸ್ಥೆಯನ್ನು ಪುನಾರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ತಿಪಟೂರು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಬಿಸಿಯೂಟ ವ್ಯವಸ್ಥೆಗೆ 50ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಶಿಕ್ಷಕರೇ ಆಹಾರ ಪದಾರ್ಥಗಳ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮಾಡಬೇಕು. ಈಗಾಗಲೇ ಶಿಕ್ಷಕರಿಗೂ ಕೂಡ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಶನಿವಾರ ಕೂಡ ಶಾಲೆಗಳು ನಡೆಯಲಿವೆ. ಅಕಸ್ಮಾತ್ ಬಿಸಿಯೂಟದ ವ್ಯವಸ್ಥೆ ಸಾಧ್ಯವಾಗದಿದ್ದಲ್ಲಿ ಅರ್ಧ ದಿನ ಮಾತ್ರ ಶಾಲೆಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಬಳಿಕ ಸಚಿವ ಬಿ.ಸಿ ನಾಗೇಶ್ ಸ್ವತಃ ವಿದ್ಯಾರ್ಥಿಗಳಿಗೆ ಪಾಯಸ ಮತ್ತು ಅನ್ನವನ್ನು ಬಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಸಚಿವರು, ದಿನವೂ ಹೀಗೆ ಇರುತ್ತದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿನಿಯರು ಹೌದು ಎಂದು ಉತ್ತರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ಪ್ರಭುಸ್ವಾಮಿ, ಉಪಪ್ರಾಚಾರ್ಯ ಚೆನ್ನೇಗೌಡ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: ರಾಜ್ಯಾದ್ಯಂತ ಅಕ್ಟೋಬರ್ 21ರಿಂದ ಮಧ್ಯಾಹ್ನ ಬಿಸಿಯೂಟ ಆರಂಭ: ಸಚಿವ ಬಿ.ಸಿ.ನಾಗೇಶ್