ತುಮಕೂರು : ಅನಧಿಕೃತ ಪ್ರಾಣಿ ಹತ್ಯೆ ಮತ್ತು ಸಾಗಾಣಿಕೆ ತಡೆಗಟ್ಟಲು ಜಿಲ್ಲೆಯಲ್ಲಿ ಸದ್ದಿಲ್ಲದೆ ಜಾನುವಾರುಗಳಿಗೆ ಇಯರ್ ಟ್ಯಾಗ್ ಅಳವಡಿಸಲಾಗುತ್ತಿದೆ. ಇನ್ಮುಂದೆ ಜಾನುವಾರುಗಳ ಸಾಗಾಣಿಕೆ ವೇಳೆ ಇಯರ್ ಟ್ಯಾಗ್ ಇದ್ದರೆ ಮಾತ್ರ ಸಾಗಾಣಿಕೆಗೆ ಅನುಮತಿ ಇರುತ್ತದೆ.
ಪ್ರಾಣಿಗಳ ರಕ್ಷಣೆ ಹಾಗೂ ಮಾಲೀಕತ್ವದ ಮಾಹಿತಿಗಾಗಿ ಜಾನುವಾರುಗಳಿಗೆ ಇಯರ್ (ಕಿವಿಗೆ) ಟ್ಯಾಗ್ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದೆ. ತುಮಕೂರು ನಗರದಲ್ಲಿ 3,800 ಜಾನುವಾರುಗಳಿವೆ. ಈಗಾಗಲೇ 3,200 ಜಾನುವಾರುಗಳಿಗೆ ಇಯರ್ ಟ್ಯಾಗ್ ಅಳವಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಜಾನುವಾರುಗಳಿಗೆ ಟ್ಯಾಗ್ ಅಳವಡಿಸಲಾಗಿದೆ.
ಇನ್ಮುಂದೆ ಯಾರೇ ಜಾನುವಾರುಗಳನ್ನು ಖರೀದಿಸಿದರೂ ಅವುಗಳಲ್ಲಿ ಇಯರ್ ಟ್ಯಾಗ್ ಕಡ್ಡಾಯವಾಗಿರುತ್ತದೆ. ಇಲ್ಲದಿದ್ದರೆ, ಅದು ಅನಧಿಕೃತವಾಗಿರುತ್ತದೆ. ಜಾನುವಾರು ಖರೀದಿಸಿದ್ದರೆ, ಅದಕ್ಕೆ ಮಾಲೀಕತ್ವದ ದಾಖಲೆ ಪಡೆದುಕೊಳ್ಳಬೇಕು. ಅನಧಿಕೃತ ಪ್ರಾಣಿ ಹತ್ಯೆ ಮತ್ತು ಸಾಗಾಣಿಕೆಗೆ ಸಂಪೂರ್ಣ ಕಡಿವಾಣ ಹಾಕಲು ಇದು ಸಹಕಾರಿಯಾಗಿದೆ.
ಮಾಲೀಕತ್ವ ಹಾಗೂ ಇಯರ್ ಟ್ಯಾಗ್ ಸೇರಿದಂತೆ ಜಾನುವಾರು ‘ನನ್ನ ಮಾಲೀಕತ್ವ’ದ್ದು ಎನ್ನುವುದಕ್ಕೆ ಜಾನುವಾರು ಮಾಲೀಕರ ಬಳಿ ದಾಖಲೆ ಇಲ್ಲದಿದ್ದರೆ, ಹತ್ತಿರದ ಗೋಶಾಲೆ ವಶಕ್ಕೆ ಜಾನುವಾರುಗಳನ್ನು ಪಡೆದುಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಇಯರ್ ಟ್ಯಾಗ್ ಅಳವಡಿಕೆಯೊಂದಿಗೆ ಮಾಲೀಕತ್ವ ಪತ್ರದ ದಾಖಲೆ ಪಡೆದು ಜಾನುವಾರುಗಳ ಮಾಲೀಕರ ಜೊತೆಗೆ ಛಾಯಾಚಿತ್ರ ಪಡೆದುಕೊಳ್ಳಲಾಗುತ್ತದೆ. ಅಕಸ್ಮಾತ್ ಜಾನುವಾರುಗಳು ಕಳುವಾದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಸುಲಭವಾಗಿ ಇಯರ್ ಟ್ಯಾಗ್ ಮೂಲಕ ಜಾನುವಾರುಗಳ ಮಾಲೀಕರನ್ನು ಪತ್ತೆ ಮಾಡಬಹುದು.
ಅನಧಿಕೃತ ಪ್ರಾಣಿ ಹತ್ಯೆ ಹಾಗೂ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ತುಮಕೂರು ನಗರದಲ್ಲಿ 6 ಸೇರಿದಂತೆ ಜಿಲ್ಲೆಯಲ್ಲಿ 35 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ವಾಹನಗಳ ತಪಾಸಣಾ ಕಾರ್ಯ ಕಟ್ಟುನಿಟ್ಟಾಗಿ ನಡೆಯುತ್ತಿದ್ದು, ಪ್ರಾಣಿಗಳ ಅಕ್ರಮ ಸಾಗಾಣೆ ದೂರು ಬಂದ ತಕ್ಷಣವೇ ಕ್ರಮ ಜರುಗಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವೇಳೆ ವಾಹನಗಳನ್ನು ಸೀಜ್ ಮಾಡಿ ರಿಜಿಸ್ಟ್ರೇಷನ್ ರದ್ದುಪಡಿಸಲು ಕ್ರಮಕೈಗೊಳ್ಳಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕ ಸಾವು: ಅಚಾತುರ್ಯಕ್ಕೆ ಮರುಗಿ ಆತ್ಮಹತ್ಯೆಗೆ ಶರಣಾದ ಪಿಹೆಚ್ಡಿ ವಿದ್ಯಾರ್ಥಿ