ತುಮಕೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾಗೂ ಬಾಬು ಜಗಜೀವನ ರಾಂ ಭವನದ ಶಂಕುಸ್ಥಾಪನೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಾಬು ಜಗಜೀವನ ರಾಂ ಭವನದ ಕಟ್ಟಡಕ್ಕೆ ಶೀಘ್ರವಾಗಿ ಶಂಕುಸ್ಥಾಪನೆಗೊಳಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಲಿತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು. ಬಾಬು ಜಗಜೀವನರಾಂ ಭವನವನ್ನು ಪ್ರಾರಂಭಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾದಿಗ ದಂಡೋರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರಸ್ವಾಮಿ, ಬಾಬು ಜಗಜೀವನ ರಾಂ ಭವನವನ್ನು ನಿಗದಿಪಡಿಸಿರುವ ಪ್ರದೇಶದಲ್ಲಿನ ನಿವೇಶನದ ಗೊಂದಲವನ್ನು ಸರಿಪಡಿಸಿ ಕಾಮಗಾರಿ ನಡೆಸಲು ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಮೂಲಕ ಕಟ್ಟಡವನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.