ತುಮಕೂರು: ಕೇಂದ್ರ ಸರ್ಕಾರದ ನೀತಿಗಳು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ರೀತಿಯಲ್ಲಿವೆ. ಕೇಂದ್ರ ಬಿಜೆಪಿ ಸರ್ಕಾರ ದೇಶದ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ತಳ್ಳುತ್ತಿದೆ ಎಂದು ಸಿಪಿಐ ಪಕ್ಷದ ಮುಖಂಡ ಸೈಯದ್ ಮುಜೀಬ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿ, ಆರ್ಥಿಕ ಹಿಂಜರಿತ ಹಾಗೂ ಬರ ಮತ್ತು ನೆರೆ ಪರಿಹಾರ ನೀತಿಗಳ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರದ ಬಿಎಸ್ಎನ್ಎಲ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸೈಯದ್ ಮುಜೀಬ್, ರೈತರ ಬಳಿ ಜೀವನ ಸಾಗಿಸಲು ಹಣವಿಲ್ಲ, ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿ ಉಂಟಾಗಿದ್ದು, ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೇ ಬೀದಿಗೆ ಬರುವ ಪರಿಸ್ಥಿತಿ ಇದೆ. ದೇಶದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ. ಈ ಸಮಸ್ಯೆಗಳನ್ನು ಪರಿಹರಿಸಬೇಕಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ರೀತಿಯಲ್ಲಿದೆ ಎಂದು ದೂರಿದರು.