ತುಮಕೂರು : ದಲಿತ ಮುಖ್ಯಮಂತ್ರಿ (Dalit CM) ಮಾಡಬೇಕೆಂಬ ಹೇಳಿಕೆ ಕೇವಲ ಕಾಂಗ್ರೆಸ್ ಬೂಟಾಟಿಕೆ. ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿದು ಅವರನ್ನು ಬೇರು ಸಮೇತ ಕಿತ್ತೆಸೆಯುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ(B.Y.Vijayendra) ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ನಗರದಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿ ಪರಮೇಶ್ವರ್ ಅವರನ್ನು ಸೋಲಿಸುವ ಯತ್ನ ಮಾಡಿದರು. ಇಂತಹ ಕಾಂಗ್ರೆಸ್ ಮುಖಂಡರು ದಲಿತ ಸಿಎಂ ಎನ್ನುತ್ತಾರೆ. ಎಲ್ಲಾ ಜಾತಿಗಳಿಗೆ ಸಮನಾದ ಅಧಿಕಾರ ನೀಡಿರುವುದು ಬಿಜೆಪಿ ಒಂದೇ ಎಂದರು.
ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ದಲಿತ ಸಮುದಾಯದ ಮುಖಂಡರಿಗೆ ನೀಡಲಾಗಿದೆ. ನಮ್ಮ ಪಕ್ಷ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ.
ರಾಜ್ಯದ ಪ್ರತಿ ಹಳ್ಳಿಗೂ ಬಿಜೆಪಿ ತಲುಪಿದೆ. ನಮ್ಮ ಪಕ್ಷದ ಅತೀ ಹೆಚ್ಚು ಜನಪ್ರತಿನಿಧಿಗಳು ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಬಿಜೆಪಿ ಎಂದರೆ ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿಯಾಗಿದೆ ಎಂದು ವಿಜಯೇಂದ್ರ ತಿಳಿಸಿದರು.