ತುಮಕೂರು: ಜಾಹೀರಾತು ಏಜೆನ್ಸಿಗಳ ನಡುವಿನ ಪೈಪೋಟಿಯಿಂದ ನಗರದ ಬಿ.ಹೆಚ್ ರಸ್ತೆಯಲ್ಲಿ ಮರಗಳು ಬಲಿಯಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಬಿ.ಹೆಚ್ ರಸ್ತೆಯ ಮಧ್ಯಭಾಗದಲ್ಲಿ ಇರುವ ಸ್ಥಳದಲ್ಲಿ ಜಾಹೀರಾತು ಅಳವಡಿಸಲು ಏಜೆನ್ಸಿಗಳಿಗೆ ತುಮಕೂರು ಮಹಾನಗರಪಾಲಿಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕಾಗಿ ಈಗಾಗಲೇ ಪಾಲಿಕೆ ವತಿಯಿಂದ ಟೆಂಡರ್ ಕೂಡ ಕರೆಯಲಾಗಿತ್ತು ಎಂಬ ಮಾಹಿತಿ ಇದೆ.
ಅದರಂತೆ ಬೆಂಗಳೂರು ಮೂಲದ ಸಂಸ್ಥೆಯೊಂದು ತನ್ನ ಹಕ್ಕನ್ನು ಪಡೆದಿತ್ತು. ಆದರೆ ಜಾಹೀರಾತು ಫಲಕಗಳನ್ನು ಅಳವಡಿಸಲು ಮತ್ತೊಂದು ಸಂಸ್ಥೆ ಪೈಪೋಟಿ ನಡೆಸಿತ್ತು. ಈ ನಡುವೆ ಮೊದಲು ಹಕ್ಕು ಪಡೆದಿರುವ ಸಂಸ್ಥೆಗೆ ಕೆಟ್ಟ ಹೆಸರು ತರಲು ಮತ್ತೊಂದು ಸಂಸ್ಥೆ ಜಾಹೀರಾತುಗಳನ್ನು ಅಳವಡಿಸುವ ಸ್ಥಳದಲ್ಲಿರುವ ಮರಗಳನ್ನು ಕಡಿದು ಹಾಕುವ ಮೂಲಕ ತಮ್ಮ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಜಾಹೀರಾತು ಸಂಸ್ಥೆಯ ಮಾಲೀಕ ರಂಗನಾಥ ಆರೋಪಿಸಿದ್ದಾರೆ.
ಅಲ್ಲದೇ, 2015 ರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಜಾಹೀರಾತು ಫಲಕಗಳನ್ನು ಅಳವಡಿಸಲು ಬೆಂಗಳೂರು ಮೂಲದ ಒಂದೇ ಸಂಸ್ಥೆ ಪಡೆಯುತ್ತಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎನ್ನಲಾಗ್ತಿದೆ. ಎರಡು ಜಾಹೀರಾತು ಸಂಸ್ಥೆಗಳ ಪೈಪೋಟಿಯ ನಡುವೆ ತುಮಕೂರು ನಗರದಲ್ಲಿ ಹುಲುಸಾಗಿ ಬೆಳೆದಿದ್ದ 10ಕ್ಕೂ ಹೆಚ್ಚು ಮರಗಳು ಬಲಿಯಾಗಿವೆ. ಅಲ್ಲದೇ, ಮರಗಳನ್ನು ಕಡಿದು ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಮುಂದಾದರೂ ಹೊಣೆಗಾರರು ಇತ್ತ ಗಮನ ಹರಿಸಿ ಮರಗಳನ್ನು ಉಳಿಸಲು ಮುಂದಾಗಬೇಕಿದೆ.
ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ನಾಯಕರ ವಿರುದ್ಧ ಕ್ರಮ ಕೋರಿ ಅರ್ಜಿ: ಪಿಐಎಲ್ ಆಗಿ ಪರಿಗಣಿಸಲು ಮನವಿ