ತುಮಕೂರು: ಕ್ರಿಸ್ಮಸ್ ಹಾಗೂ ನೂತನ ವರ್ಷಾಚರಣೆಯನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಹಿನ್ನೆಲೆ, ಈ ಬಾರಿ ಕೇಕ್ ಮಾರಾಟದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.
ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆ, ಅದ್ಧೂರಿ ಆಚರಣೆಗಳಿಗೆ ಬ್ರೇಕ್ ಹಾಕಲಾಗಿದ್ದು, ಜನರು ಕೇಕ್ ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದಾಗಿ ಬೇಕರಿ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿವರ್ಷ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಬಂತೆಂದರೆ ಕೇಕ್ಗಳಿಗೆ ಭಾರಿ ಬೇಡಿಕೆ ಇರುತ್ತಿತ್ತು. ಸಣ್ಣ-ಪುಟ್ಟ ಬೇಕರಿಗಳಲ್ಲೂ ಸಹ 800 ರಿಂದ 1,000 ಕೇಕ್ ತಯಾರಿಸಿ ಕೊಡಲು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೇಕ್ ಕೊಳ್ಳಲು ಜನರು ಮುಂದೆ ಬರುತ್ತಿಲ್ಲ.
ಇನ್ನು, ಪ್ರತಿಬಾರಿ ಕಾಲೇಜು ವಿದ್ಯಾರ್ಥಿಗಳಿಂದ ಕೇಕ್ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಕಳೆದ 10 ತಿಂಗಳಿನಿಂದ ಕಾಲೇಜುಗಳು ಕೂಡ ಬಂದ್ ಆಗಿರುವುದರಿಂದ ನಗರದಲ್ಲಿರುವ ವಿದ್ಯಾರ್ಥಿಗಳು ತಮ್ಮ ಮನೆ ಸೇರಿದ್ದಾರೆ. ಹೀಗಾಗಿ ವ್ಯಾಪಾರವಿಲ್ಲದೆ ಬೇಕರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ.