ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕೊಲೆಯಾದ ಹರ್ಷನ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಮೊನ್ನೆ ಹರ್ಷನ ಸಹೋದರಿ ಅಶ್ವಿನಿ ಗೃಹ ಸಚಿವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿದಾಗ ಗೃಹ ಸಚಿವರು ತಮ್ಮೂಂದಿಗೆ ಸರಿಯಾಗಿ ಮಾತನಾಡದೆ, ನಮ್ಮ ವಿರುದ್ಧವೇ ಜೋರಾಗಿ ಮಾತನಾಡಿಸಿ ಕಳುಹಿಸಿದ್ದಾರೆ. ನಾನೊಬ್ಬ ಹೆಣ್ಣು ಮಗಳು ಎಂಬುದನ್ನೂ ಮರೆತು ಜನರ ಮುಂದೆ ಹಾಗೆ ವರ್ತಿಸಿದ್ದು ಸರಿಯಲ್ಲ ಎಂದು ಅಶ್ವಿನಿ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಅನ್ಯಕೋಮಿನ ಯುವಕರು ಹತ್ಯೆಗೈದಿದ್ದರು. ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ. ಪ್ರಸ್ತುತ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಅಶ್ವಿನಿ ಅವರು ತಮ್ಮನ ಸಾವಿಗೆ ನ್ಯಾಯ ಕೇಳಿದ್ದಾರೆ. ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸರ್ಕಾರ ನಿಮ್ಮ ಕುಟುಂಬದ ಜೊತೆ ಇದೆ. ನಾವು ನಿಮಗೆ ದ್ರೋಹ ಮಾಡುತ್ತಿದ್ದೇವೆ ಎನ್ನುವ ರೀತಿ ಮಾತನಾಡುತ್ತಿದ್ದೀಯಲ್ಲ ಎಂದು ಗೃಹ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅಶ್ವಿನಿ ಆರೋಪಿಸಿದರು. ಇದಕ್ಕೆ ಆಕ್ರೋಶಗೊಂಡ ಅಶ್ವಿನಿ, ನಿಮ್ಮ ಭೇಟಿಗೆ ಬಂದದ್ದಕ್ಕೆ ಒಳ್ಳೆ ಮರ್ಯಾದೆ ಕೊಟ್ಟಿದ್ದೀರಿ. ನ್ಯಾಯ ಕೇಳುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ನನ್ನ ತಮ್ಮ ಕೊಲೆಯಾದಾಗ ನಮ್ಮ ಮನೆಗೆ ಬಂದು ಕಣ್ಣೀರು ಹಾಕಿ ಹೋಗಿದ್ದ ಗೃಹ ಸಚಿವರು ಈಗ ಈ ರೀತಿ ಮಾತನಾಡುತ್ತಿರುವುದು ನಮಗೆ ತೀವ್ರ ನೋವುಂಟು ಮಾಡಿದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯೇ ಹೋಗಿದೆ. ಆದರೆ ನಮಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಹರ್ಷ ಹತ್ಯೆ ಮಾಡಿದ ಆರೋಪಿಗೆ ಜೈಲಿನಲ್ಲಿ ರಾಜಾತಿಥ್ಯ.. ವಿಡಿಯೋ ವೈರಲ್