ಶಿವಮೊಗ್ಗ: ಹಿಜಾಬ್-ಕೇಸರಿ ಸಂಘರ್ಷ ಪ್ರಕರಣ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಅಂತಿಮ ತೀರ್ಪು ನೀಡುವವರೆಗೂ ಧಾರ್ಮಿಕ ಸಮವಸ್ತ್ರ ಧರಿಸಿ ಶಾಲಾ-ಕಾಲೇಜಿಗೆ ಬಾರದಂತೆ ನ್ಯಾಯಾಲಯ ಸೂಚಿಸಿದ ಮಧ್ಯೆಯೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದಾರೆ.
ಈ ಮಧ್ಯೆ ಶಿವಮೊಗ್ಗದ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆದ ಘಟನೆ ಇಂದು ನಡೆದಿದೆ. ಬಿ ಹೆಚ್ ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ 9ನೇ ತರಗತಿಯ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆಗಿದ್ದಾರೆ.
ಇಂದು ಶಾಲೆಯಿಂದ ವಾಪಸ್ ಆದ ಇಬ್ಬರು ವಿದ್ಯಾರ್ಥಿನಿಯರು ನಿನ್ನೆ ಗೈರಾಗಿದ್ದರು. ಇಂದು ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಗೆಂದು ಬಂದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಗೆ ಬರಲು ಶಾಲಾ ಸಿಬ್ಬಂದಿ ಸೂಚಿಸಿದಾಗ, ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿ ಶಾಲೆಯಿಂದ ನಿರ್ಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ 10ನೇ ತರಗತಿ ವಿದ್ಯಾರ್ಥಿನಿ ಹೀನಾ ಕೌಸರ್, ನಾನು ಹಿಜಾಬ್ ಇಲ್ಲದೆಯೇ ಶಾಲೆಗೆ ಬರಲ್ಲ. ನಮ್ಮ ಧರ್ಮದಲ್ಲಿ ಹಿಜಾಬ್ ಹಾಕಬೇಕೆಂದು ಇದೆ. ಇದರಿಂದ ನಾನು ಹಿಜಾಬ್ ಹಾಕೇ ಹಾಕುತ್ತೇನೆ. ಕೋರ್ಟ್ ತೀರ್ಪು ಬಂದ ಮೇಲೆ ನೋಡೋಣ. ಸದ್ಯಕ್ಕೆ ನಾನು ಹಿಜಾಬ್ ತೆಗೆಯಲ್ಲ, ಶಾಲೆಯಿಂದ ನಾನೇ ಹಿಂದಿರುಗುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.
ನಿನ್ನೆ ಕೂಡ ಇದೇ ರೀತಿ ಹಿಜಾಬ್ ಧರಿಸಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯರನ್ನು ಶಾಲಾ ಸಿಬ್ಬಂದಿ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸ್ ಆಗಿದ್ದರು. ಇಂದು ಅವರು ಶಾಲೆಗೆ ಬಂದಿಲ್ಲ.
ಓದಿ: 'ಹಿಜಾಬ್ ತೆಗಿಸಬೇಡಿ'.. ಶಾಲಾ ಸಿಬ್ಬಂದಿ ಜೊತೆಗೆ ಸಾಮಾಜಿಕ ಹೋರಾಟಗಾರ್ತಿ ವಾಗ್ವಾದ