ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಪ್ರಧಾನಿ ನರೇಂದ್ರ ಮೋದಿರವರು ಗ್ರಾಮೀಣಾಭಿವೃದ್ದಿ ಖಾತೆಗೆ 1 ಲಕ್ಷ ಕೋಟಿ ರೂ. ನೀಡಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಜನ ತಮ್ಮೂರಿನ ಕಡೆ ಮುಖ ಮಾಡಿದ್ದಾರೆ. ಇದರಿಂದ ನರೇಗಾದಲ್ಲಿ ಉದ್ಯೋಗ ಕಾರ್ಡ್ ಪಡೆದು ಉದ್ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮುಂದಿನ ದಿನಗಳನ್ನು 100 ದಿನಗಳಿಂದ 150 ದಿನಕ್ಕೆ ಹೆಚ್ಚಿಸಲಾಗಿದೆ. ನಿನ್ನೆ ಒಂದೇ ದಿನ ನರೇಗಾ ಯೋಜನೆಯಡಿ 9.20 ಲಕ್ಷ ಜನ ಕೆಲಸ ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ನರೇಗಾ ಕೆಲಸಕ್ಕೆ ಜನ ಬರುತ್ತಿದ್ದಾರೆ. ಅಂತರ್ಜಲ ಹೆಚ್ಚಳಕ್ಕೆ ಈಗ ಪೈಲೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಅಂತರ್ಜಲ ಚೇತನ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಅಧಿಕಾರಿಗಳು ಹಾಗು ನಾವು ಒಂದೇ ಮನೆಯವರಿದ್ದಂತೆ, ಬ್ರಹ್ಮ ಬಂದರೂ ಸಹ ನರೇಗಾ ಕಾಮಗಾರಿ ನಿಲ್ಲುವುದಿಲ್ಲ, ಕೆಲಸಕ್ಕೆ ತೊಂದರೆ ಕೊಡುವವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿ ಅವರಿಂದಲೇ ಬೆಂಬಲ ಪಡೆಯಲಾಗುವುದು. ಇಲಾಖೆಯ ಕೆಲಸಕ್ಕೆ ತೊಂದರೆಯಾದ್ರೆ ಸಿಎಂ ಜೊತೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷ ಹಾಗೂ ಸಂಘಟನೆ ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಈಗ ಹೆಚ್ಚಿನ ಕಾಲವನ್ನು ಇಲಾಖೆಗೆ ನೀಡುತ್ತಿದ್ದೇನೆ. ಇನ್ನು ಮೇ 23 ಮತ್ತು 25 ರಂದು ನಗರದ ವಿವಿಧ ವಾರ್ಡ್ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೊಜೆ ನಡೆಸಲಾಗುವುದು ಎಂದರು.