ಶಿವಮೊಗ್ಗ: ತಾಯಿ -ಮಗುವಿನ ಸಂಬಂಧವನ್ನು ಜಾನಪದ ಹಾಡಿನ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ವಿವರಿಸಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಎ ಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದ ಸಚಿವೆ, ತಾಯಿ ಮಗುವಿನ ಸಂಬಂಧವನ್ನು ಜಾನಪದ ಹಾಡಿನ ಮೂಲಕ ವಿವರಿಸಿದರು. ನಂತರ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಗರ್ಭಿಣಿ ತಾಯಿ ಆರೋಗ್ಯವಾಗಿದ್ದರೆ ಹುಟ್ಟುವ ಮಗುವ ಆರೋಗ್ಯವಾಗಿ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ತನ್ನ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ಹಾಗಾಗಿ ಪೌಷ್ಟಿಕ ಆಹಾರಗಳನ್ನು ಇಲಾಖೆಯ ಮೂಲಕ ನೀಡಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ-ಮಗುವಿನ ಆರೋಗ್ಯಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ತಾಯಿ ಆರೋಗ್ಯವಾಗಿದ್ದರೆ ಹುಟ್ಟುವ ಮಗು ಕೂಡ ಆರೋಗ್ಯವಾಗಿರುತ್ತದೆ. ಹಾಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಈ ವೇಳೆ ಸಚಿವ ಕೆ.ಎಸ್. ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಉಪಸ್ಥಿತರಿದ್ದರು.