ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ವಿಚಾರಕ್ಕೆ ನಡೆದ ಗಲಾಟೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಗಲಾಟೆಯಿಂದಾಗಿ ಬಿಜೆಪಿ ಕಾರ್ಯಕರ್ತರಾದ ವಿಶ್ವನಾಥನ್, ಆನಂದ್ ಗಾಣಿಗ, ಯಶಸ್ವಿ ಕಡ್ತುರ್, ಸುಮಂತ್ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯ ನಮೃತ್, ಸುಭಾಷ್ ಕುಲಾಲ್ ಆಸ್ಪತ್ರೆ ಸೇರಿದ್ದಾರೆ.
ಏನಿದು ಘಟನೆ?
ತೀರ್ಥಹಳ್ಳಿಯ ಸೀಬಿನಕೆರೆ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಲಾಗುತ್ತಿತ್ತು. ಈ ವೇಳೆ ಲಸಿಕೆ ಹಾಕುವ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಇದು ಘರ್ಷಣೆಗೆ ತಿರುಗಿದ್ದು, ಬಿಜೆಪಿಯ ವಿಶ್ವನಾಥ್ ಗಾಣಿಗ ಮತ್ತು ಕಾಂಗ್ರೆಸ್ನ ನಮೃತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಬಳಿಕ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಮತ್ತೆ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತ ಸುಭಾಷ್ ಕುಲಾಲ್, ಬಿಜೆಪಿ ಕಾರ್ಯಕರ್ತರಾದ ಯಶಸ್ವಿ ಕಡ್ತುರ್ ಗಾಯಗೊಂಡಿದ್ದಾರೆ. ಬಳಿಕ ಎರಡೂ ಪಕ್ಷದ ನಾಯಕರು ಆಸ್ಪತ್ರೆ ಮುಂದೆ ಜಮಾವಣೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕಾಗಮಿಸಿ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.
ಎರಡು ಪಕ್ಷಗಳಿಂದ ಪ್ರತಿಭಟನೆ
ಈ ಘಟನೆ ಬಳಿಕ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಚೌಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಡಿವೈಎಸ್ಪಿ ಶಾಂತವೀರಪ್ಪ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯಿತ್ತ ನಂತರ ಪ್ರತಿಭಟನೆ ಹಿಂಪಡೆದರು.
ಈ ಪ್ರತಿಭಟನೆ ಮುಗಿಯುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಸಂದೇಶ ಜವಳಿ, ಕಾಸರವಳ್ಳಿ ಶ್ರೀನಿವಾಸ್, ಹೆದ್ದೂರು ನವೀನ್, ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ಹೊತ್ತಿ ಉರಿದ ಲಾರಿಗಳು, ಚಾಲಕ ಸಜೀವ ದಹನ