ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯವರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ಯುವಕರು ಧರಣಿ ನಡೆಸುತ್ತಿದ್ದಾರೆ.
ತಾಲೂಕು ಕಚೇರಿ ಮುಂದೆ ಇಂದು ಮಧ್ಯಾಹ್ನದಿಂದ ಕೆಳಕೆರೆ ಪೂರ್ಣೇಶ್ ಹಾಗೂ ಸ್ನೇಹಿತರು ಧರಣಿ ಸತ್ಯಗ್ರಹ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನಾದ್ಯಂತ ಪ್ರತಿ ಗ್ರಾಮದಲ್ಲೂ ಸಣ್ಣ ಪುಟ್ಟ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಮದ್ಯವನ್ನು ಕುಡಿದು ಯುವಕರು, ಪುರುಷರು ಸಾವನ್ನಪ್ಪುತ್ತಿದ್ದಾರೆ. ಕುಡಿತದ ಚಟಕ್ಕೆ ಬಿದ್ದು, ದುಡಿದ ಹಣವನ್ನೆಲ್ಲಾ ಖರ್ಚು ಮಾಡಿ ಕುಟುಂಬವನ್ನು ಉಪವಾಸಕ್ಕೆ ನೂಕುತ್ತಿದ್ದಾರೆ. ಇದರಿಂದಾಗಿ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ತಿಳಿದು ತಿಳಿಯದಂತೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕುರಿತು ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ಸಾಕಷ್ಟು ಮನವಿ ನೀಡಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಹಾಗಾಗಿ ಡಿಸಿ ಅವರು ಸ್ಥಳಕ್ಕೆ ಬಂದು ಅಕ್ರಮ ಮದ್ಯದ ಬಗ್ಗೆ ಕ್ರಮ ಜರುಗಿಸುವ ಭರವಸೆ ನೀಡುವವರೆಗೂ ನಮ್ಮ ಧರಣಿ ಮುಂದುವರೆಯುತ್ತದೆ ಎಂದು ಕೆಳಕೆರೆ ಪೂರ್ಣೇಶ್ ತಿಳಿಸಿದ್ದಾರೆ.