ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 30 ಜನರ ವಿರುದ್ಧ ಜೆ.ಸಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 448 (ಮನೆಗೆ ಅತಿಕ್ರಮ ಪ್ರವೇಶ), 143 (ಕಾನೂನು ಬಾಹಿರ ಗುಂಪುಗಾರಿಕೆ), 147 (ಕಾನೂನು ಉಲ್ಲಂಘಿಸಿ ಪ್ರತಿಭಟನೆ), 149 (ಗುಂಪುಗೂಡಿ ಕಾನೂನು ಬಾಹಿರ ಪ್ರತಿಭಟನೆ) ಅಡಿ ಪ್ರಕರಣ ದಾಖಲಿಸಲಾಗಿದೆ.
ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಇಂದು ಬೆಳಗ್ಗೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ನ ಗೃಹ ಸಚಿವರ ಸರ್ಕಾರಿ ನಿವಾಸದ ಬಳಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು, ಸಚಿವರ ಮನೆ ಒಳಗೆ ನುಗ್ಗಿ ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ 29 ಪುರುಷರು ಹಾಗೂ ಓರ್ವ ಮಹಿಳೆ ಸೇರಿದಂತೆ ಒಟ್ಟು 30 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ, ಲಘು ಲಾಠಿ ಚಾರ್ಜ್)
ಜೆ.ಸಿ.ನಗರ ಠಾಣೆಯ ಇಬ್ಬರು ಸಿಬ್ಬಂದಿ ಅಮಾನತು: ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಜೆ.ಸಿ ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯ ತಲೆದಂಡವಾಗಿದೆ. ಕರ್ತವ್ಯಲೋಪದ ಆರೋಪದಡಿ ಠಾಣಾ ಪಿಎಸ್ಐ ರಾಜಸಾಬ್ ಹಾಗೂ ಎಸ್.ಬಿ ಶ್ರೀನಿವಾಸಮೂರ್ತಿಯನ್ನ ಅಮಾನತುಗೊಳಿಸಿ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ: ಗುಪ್ತಚರ ಇಲಾಖೆ ವೈಫಲ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡ ಪೊಲೀಸ್ ಕಮಿಷನರ್