ಶಿವಮೊಗ್ಗ: 'ಪೋಷಣ್ ಅಭಿಯಾನ್' ಯೋಜನೆಯಡಿ ಪೌಷ್ಟಿಕ ಪ್ರಾತ್ಯಕ್ಷಿತೆ ಮತ್ತು ಅರಿವು ಜಾಥಾ ಕಾರ್ಯಕ್ರಮವನ್ನು ನಗರದಲ್ಲಿ ಉದ್ಘಾಟಿಸಲಾಯ್ತು.
ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಗರ್ಭಿಣಿಯರಿಗೆ ಸಾಂಪ್ರದಾಯಿಕವಾಗಿ ಫಲ-ಪುಷ್ಪ ನೀಡಿ, ಉಡಿ ತುಂಬಿ ಆರತಿ ಎತ್ತಿ ಗೌರವಿಸಲಾಯ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಸೀಮಂತ ನಮ್ಮ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬ. ತಾಯ್ತನ ಹೆಣ್ಣಿಗೆ ಸದಾ ಸಂಭ್ರಮಿಸುವ ಸಂಗತಿ. ಜನಿಸುವ ಎಲ್ಲಾ ಮಕ್ಕಳು ಆರೋಗ್ಯವಂತವಾಗಿರಬೇಕು. ಅದಕ್ಕಾಗಿ ಗರ್ಭಿಣಿಯರು ಪೌಷ್ಟಿಕಾಂಶಯುಕ್ತ ಆಹಾರ ಕ್ರಮ ಅನುಸರಿಸಬೇಕು. ಅದಕ್ಕಾಗಿ ಸದಾ ಶ್ರಮಿಸುತ್ತಿರುವ ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರ ಸೇವೆ ಸ್ಮರಣೀಯವಾದುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಅವರು ಕಾರ್ಯಕ್ರಮದಲ್ಲಿ ಮಹಿಳೆಯರು ತಯಾರಿಸಿ ತಂದಿದ್ದ 100ಕ್ಕೂ ಹೆಚ್ಚಿನ ಬಗೆ ಬಗೆಯ ಪೌಷ್ಟಿಕಾಂಶಯುಕ್ತ ಆಹಾರದ ಕೋಣೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜನರಲ್ಲಿ ಅರೋಗ್ಯದ ಅರಿವು ಮೂಡಿಸುವ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.