ಬೆಂಗಳೂರು/ಶಿವಮೊಗ್ಗ: ನಗರದ ಸದಾಶಿವನಗರಲ್ಲಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಸಚಿವರೊಂದಿಗೆ ಶಿವಮೊಗ್ಗ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.
ರಾಜ್ಯ ಸರ್ಕಾರವು ಕ್ಷೇತ್ರಕ್ಕೆ ನೀಡಬೇಕಾದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ರಾಘವೇಂದ್ರ ಅವರು ಮನವಿ ಮಾಡಿದರು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಏನಾದರೂ ತೊಡಕುಂಟಾದೆ, ಪರವಾನಗಿಗಳ ಅಗತ್ಯವಿದ್ದರೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆಯಾದ ಯಾವೊಂದು ಯೋಜನೆಗಳಿಗೂ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಜನಪ್ರತಿನಿಧಿಗಳು ಜನರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ ಎಂದು ವಿವರಿಸಿದರು.
ಈ ವೇಳೆ ರಾಘವೇಂದ್ರ ಅವರು ಡಿಕೆಶಿ ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್, ವಿಧಾನ ಪರಿಷತ್ ಸದಸ್ಯ ಕವಟಗಿಮಠ, ಎಪಿಎಂಸಿ ನಿರ್ದೇಶಕ ಜ್ಯೋತಿಪ್ರಕಾಶ್ ಇದ್ದರು.