ಶಿವಮೊಗ್ಗ: ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳು ತಮ್ಮ ಹುದ್ದೆಗೆ ಸಾಮೂಹಿಕ ರಾಜೀನಾಮೆ ನೀಡಿ, ಪ್ರತಿಭಟನೆಗೆ ಮುಂದಾಗಿರುವುದಾಗಿ ಜಿಲ್ಲಾ ಆಯುಷ್ ಫೆಡರೇಷನ್ ಅಧ್ಯಕ್ಷ ಡಾ.ಗುರುರಾಜ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್ಆರ್ಹೆಚ್ಎಂ/ಎನ್ಹೆಚ್ಎಂ/ಆರ್ಬಿಎಸ್ಕೆ ಅಡಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ ನೀಡಿಲ್ಲ. ಹೀಗಾಗಿ ಆಯುಷ್ ವೈದ್ಯರು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಆರೋಗ್ಯ ಮಂತ್ರಿಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿಂದೆ ಆರೋಗ್ಯ ಸಚಿವರ ಜೊತೆ ಚರ್ಚೆ ನಡೆಸಿದ ಮೇಲೆ ಅಲೋಪತಿ ಗುತ್ತಿಗೆ ವೈದ್ಯರಿಗೆ ನೀಡುವ ವೇತನವನ್ನೆ ನೀಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ, ಇದನ್ನು ಜಾರಿ ಮಾಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಆಯುಷ್ ವೈದ್ಯರಿಗೆ ಅಲೋಪತಿ ಚಿಕಿತ್ಸೆ ನೀಡಲು ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ, ಇದನ್ನು ಪರಿಶೀಲನೆ ನಡೆಸಿಲ್ಲ.
ಕಳೆದ ಎರಡು ತಿಂಗಳಿನಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಬಳಿಕ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಮಾಡಲಾಗಿತ್ತು. ಆರೋಗ್ಯ ಸಚಿವರನ್ನು ಚಿತ್ರದುರ್ಗದಲ್ಲಿ ಭೇಟಿ ಮಾಡಿ, ರಾಜ್ಯ ಸಂಘದ ವತಿಯಿಂದ ರಾಜೀನಾಮೆ ನೀಡಲಾಗಿತ್ತು. ಈಗ ಶಿವಮೊಗ್ಗ ಜಿಲ್ಲೆಯ ಎಲ್ಲಾ ಆಯುಷ್ ಗುತ್ತಿಗೆ ವೈದ್ಯರು ರಾಜೀನಾಮೆ ಸಲ್ಲಿಸಿ, ಕರ್ತವ್ಯವನ್ನು ಸ್ಥಗಿತಗೊಳಿಸಿದ್ದಾರೆ ಎಂದರು.