ಶಿವಮೊಗ್ಗ : ಕಾಂಗ್ರೆಸ್ ಪಕ್ಷದವರು ಗೂಂಡಾಗಿರಿ ಬಿಟ್ಟು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಸಮಾವೇಶ ಮಾಡಲಾಗಿದೆ. ಆದರೆ, ಜಿಲ್ಲೆಯ ಜನ ಇದ್ಯಾವುದಕ್ಕೂ ಬೆಂಬಲ ನೀಡುವುದಿಲ್ಲ ಎಂದು ಟೀಕಿಸಿದರು.
ಅಧಿಕಾರದ ಹಪಾಹಪಿ : ಅಧಿಕಾರಕ್ಕಾಗಿ ಕಾಂಗ್ರೆಸ್ ಮುಖಂಡರು ಹಪಾಹಪಿಸುತ್ತಿದ್ದಾರೆ. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನವರಿಗೆ ವಿರೋಧ ಪಕ್ಷದಲ್ಲಿ ಕೂತು ಅಭ್ಯಾಸವಿಲ್ಲ. ಇದನ್ನು ಸಹಿಸಿಕೊಳ್ಳಲಾಗದೇ ಈ ರೀತಿಯ ವಿಚಾರಗಳನ್ನು ಇಟ್ಟುಕೊಂಡು ಜನರಿಗೆ ತಪ್ಪು ತಿಳುವಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ ಜನರು ಕಾಂಗ್ರೆಸ್ ಆಡಳಿತ ನೋಡಿಯೇ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ಜನ ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಬಜೆಟ್ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದು ತಿಳಿಸಿದರು.