ಶಿವಮೊಗ್ಗ : ಜಮೀನಿಗೆ ಹೋಗುವ ದಾರಿಯಲ್ಲಿ ಗಿಡಗಳನ್ನು ಹಾಕಿದ್ದಕ್ಕೆ ಸಿಟ್ಟಿಗೆದ್ದ ಅಣ್ಣ ನಾಡ ಬಂದೂಕಿನಿಂದ ತಮ್ಮನಿಗೆ ಶೂಟ್ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಕಳೆದ ಎರಡು ದಿನದ ಹಿಂದೆ ನಡೆದ ಘಟನೆ ಇದಾಗಿದ್ದು, ಭದ್ರಾವತಿ ತಾಲೂಕಿನ ಸಿದ್ದರಮಟ್ಟಿಯಲ್ಲಿ ಮುನಿಸ್ವಾಮಿ ಎಂಬಾತ ತನ್ನ ಸಹೋದರ ಮುರುಗೇಶ್ನಿಗೆ ನಾಡ ಬಂದೂಕಿನಿಂದ ಶೂಟ್ ಮಾಡಿದ್ದಾನೆ.
ಇದರಿಂದ ಮುರುಗೇಶನ ತೊಟೆ ಸೀಳಿ ಹೋಗಿದೆ. ತಕ್ಷಣ ಮುರುಗೇಶ್ನನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ. ಸಿದ್ದರಮಟ್ಟಿಯಲ್ಲಿ ಮುರುಗೇಶ್, ಮುನಿಸ್ವಾಮಿ ಸೇರಿ ಅವರ ತಂದೆಗೆ ಏಳು ಜನ ಮಕ್ಕಳು. ಎಲ್ಲರೂ ತಂದೆಯ ಜಮೀನಿನ ಅರ್ಧ ಎಕರೆ ಭೂಮಿ ಪಡೆದು ಕೃಷಿ ನಡೆಸುತ್ತಿದ್ದಾರೆ. ಮುನಿಸ್ವಾಮಿ ತನ್ನ ಜಮೀನಿನ ಕೆಲಸ ಮುಗಿಸಿ ಮನೆ ಕಡೆ ವಾಪಸ್ ಆಗುವಾಗ ಜಮೀನಿಗೆ ಹೋಗುವ ದಾರಿಯಲ್ಲಿ ಹೂವಿನ ಗಿಡಗಳನ್ನು ಬೆಳೆಸಿದ್ದಕ್ಕೆ ಕೋಪಗೊಂಡಿದ್ದಾನೆ. ಈ ವೇಳೆ ಅಲ್ಲಿದ್ದ ತಮ್ಮನ ಹೆಂಡತಿ ಹಾಗೂ ಮಕ್ಕಳಿಗೆ ಬೈಯ್ದಿದ್ದಾನೆ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮುರುಗೇಶ್ ಮಡದಿಗೆ ಬೈದಿದ್ದಕ್ಕೆ ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮುನಿಸ್ವಾಮಿ ಮನೆಯಲ್ಲಿದ್ದ ನಾಡ ಬಂದೂಕು ತಂದು ತಮ್ಮ ಮುರುಗೇಶನ ತೊಡೆಗೆ ಗುಂಡು ಹಾರಿಸಿದ. ಇದರಿಂದ ಮುರುಗೇಶನ ತೊಡೆ ಸೀಳಿ ಹೋಗಿದೆ. ಗುಂಡು ಹಾರಿಸುತ್ತಲೇ ಭಯಗೊಂಡ ಮುನಿಸ್ವಾಮಿ ಬಂದೂಕು ಅಲ್ಲೆ ಬಿಸಾಕಿ ಪರಾರಿಯಾಗಿದ್ದಾನೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ವಿಷಪ್ರಾಶನದಿಂದ ಯುವಕ ಸಾವು.. ಆಸ್ಪತ್ರೆಗೆ ಕರೆತಂದ ಯುವತಿ ಮೇಲೆಯೇ ಗುಮಾನಿ!