ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಚಲಾವಣೆ ಇಲ್ಲದ ನಾಣ್ಯವಿದ್ದಂತೆ. ಯಾವುದೇ ಕೆಲಸಕ್ಕೂ ಬರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾ ಪಂಚಾಯತ್ ಮುಖಾಂತರ ರೈತರ ಪರ ಒಳ್ಳೆಯ ಪ್ರಯತ್ನ ನಡೆಸಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಮಹಾ ಪಂಚಾಯತ್ ಹೆಸರಿನಲ್ಲಿ ರೈತರನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಅನ್ನೋ ನೋವು ನನಗಿದೆ.
ನೇರವಾಗಿ ಕಾಂಗ್ರೆಸ್ನವರು ಆಕಾಡಕ್ಕೆ ಬಂದರೆ, ಅವರೊಂದಿಗೆ ರೈತರು ಬರುವುದಿಲ್ಲ. ಹಾಗಾಗಿ, ರೈತರನ್ನು ಹಿಡಿದುಕೊಂಡು ರೈತರ ಪರ ಇದ್ದೇವೆ ಅನ್ನೋದನ್ನು ತೋರಿಸಲು ಹೊರಟಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಚಲಾವಣೆ ಇಲ್ಲದ ನಾಣ್ಯ ಇದ್ದಂತೆ, ಯಾವುದೇ ಕೆಲಸಕ್ಕೆ ಬರಲ್ಲ ಎಂದು ಲೇವಡಿ ಮಾಡಿದರು.
ಉಪ ಚುನಾವಣೆಯ ನಂತರ ಸಿಎಂ ಬದಲಾಗುತ್ತಾರೆ ಎನ್ನುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯತ್ನಾಳ್ಗೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಶಕ್ತಿ ಇಲ್ಲ, ಅವರಿಗೆ ಹೇಳುವ ಶಕ್ತಿ ಅಷ್ಟೇ ಇದೆ ಎಂದ ಅವರು, ಮೂರು ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಾರ್ಟಿ ಗೆಲುವು ಸಾಧಿಸುತ್ತದೆ.
ಹಾಗೆಯೇ ಪ್ರತಾಪ್ ಗೌಡ ಪಾಟೀಲ್ ನಿರೀಕ್ಷೆಗೂ ಮೀರಿ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ನ ಪರಿಸ್ಥಿತಿ ಮುಗಿದಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಬಡೆದಾಡುತ್ತಿದ್ದಾರೆ. ಅದ್ಯಾವುದು ಆಗುವುದಿಲ್ಲ ಎಂದರು.
ಇನ್ನು, ವಿಶ್ವನಾಥ್ ಅವರು ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿಶ್ವನಾಥ್ಗೆ ಮಂತ್ರಿಸ್ಥಾನ ಸಿಕ್ಕಿದ್ದರೆ ಹೀಗೆ ಹೇಳುತ್ತಿದ್ದರಾ? ಎಂದು ಪ್ರಶ್ನಿಸಿದರು. ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಬಿಜೆಪಿಗೆ ಯಾಕೆ ಸೇರಿಕೊಂಡೆ ಅನ್ನೋದು ತಪ್ಪು, ನಮ್ಮಲ್ಲಿ ಕೊರತೆಗಳಿದ್ದರೆ ಹೇಳಿ, ಅದನ್ನು ತಿದ್ದಿಕೊಳ್ಳುತ್ತೇವೆ.
ಆದರೆ, ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರಲ್ಲಿ ಯಾವುದು ಒಳ್ಳೆಯದೆಂದು ಅವರೇ ಸುದ್ದಿಗೋಷ್ಠಿ ನಡೆಸಿ ತಿಳಿಸಲಿ. ಯಾಕೆಂದರೆ, ಮೂರು ಪಕ್ಷದಲ್ಲಿದ್ದವರು ಅವರು ಎಂದರು.
ಇನ್ನು, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಒಂದಾಗಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ರೀತಿ ಒಂದಾಗಿದ್ದಾರೆ ಎನ್ನುವುದನ್ನು ಅವರು ಹೇಳಬೇಕು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಕ್ಷೇತ್ರಕ್ಕೆ ಹೆಚ್ಚಿನ ಹಣ ನೀಡಿದ್ದಾರೆ. ಅದು ಆ ಕ್ಷೇತ್ರದ ರೈತರ, ಸಾರ್ವಜನಿಕ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಹಣ ಎಂದರು.
ಹುಣಸೂರು ಸ್ಫೋಟದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅತ್ಯಾಚಾರ, ಸ್ಫೋಟಗಳು ಆಗಿಲ್ಲವೇ ಎಂದು ಪ್ರಶ್ನಿಸಿದರು. ಯಾವುದೋ ಒಂದು ಘಟನೆ ಇಟ್ಟುಕೊಂಡು ಸರ್ಕಾರ ಏನು ಮಾಡುತ್ತಿಲ್ಲ ಎನ್ನುವುದು ಸರಿಯಲ್ಲ, ಸಿಬಿಐ ತನಿಖೆ ಆಗಬೇಕೆಂದರೆ ನನ್ನದೇನು ಅಭ್ಯಂತರವಿಲ್ಲ, ನನ್ನ ಬೆಂಬಲವಿ. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.