ಶಿವಮೊಗ್ಗ/ಚಾಮರಾಜನಗರ/ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನ (Kannada sahitya parishat)ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಇಂದು(ಭಾನುವಾರ) ಮತದಾನ ಆರಂಭವಾಗಿದೆ. ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಶಿವಮೊಗ್ಗದಲ್ಲಿ ಕ.ಸಾ.ಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಶಿಕಾರಿಪುರದಲ್ಲಿ 4, ಶಿವಮೊಗ್ಗದಲ್ಲಿ 3, ಉಳಿದ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆಯನ್ನು ತೆರೆಯಲಾಗಿದೆ. 9,143 ಮತದಾರರ ಹಕ್ಕು ಚಲಾವಣೆ ಮಾಡಲಿದ್ದಾರೆ. ಶಿವಮೊಗ್ಗ ಕ.ಸಾ.ಪ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. 3 ಬಾರಿ ಅಧ್ಯಕ್ಷರಾಗಿದ್ದ ಡಿ.ಮಂಜುನಾಥ್ ಕಣದಲ್ಲಿದ್ದಾರೆ. ಪತ್ರಕರ್ತರಾದ ಶಿ.ಜು. ಪಾಶ ಮತ್ತು ಗಾ.ರಾ. ಶ್ರೀನಿವಾಸ್ ಮೊದಲ ಬಾರಿ ಅಖಾಡಕ್ಕಿಳಿದಿದ್ದಾರೆ.
ಚಾಮರಾಜನಗರದಲ್ಲಿ ಮತದಾನ ಬಿರುಸು
ಚಾಮರಾಜನಗರದ 7 ಮತಗಟ್ಟೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಸಂಜೆ ಹೊತ್ತಿಗೆಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.
ಜಿಲ್ಲಾ ಕ.ಸಾ.ಪದ ಸದಸ್ಯರ ಪೈಕಿ 4,830 ಮಂದಿಗೆ ಮತ ಚಲಾಯಿಸುವ ಹಕ್ಕಿದ್ದು, ಚಾಮರಾಜನಗರ ತಾಲೂಕಿನಲ್ಲಿ 2,524, ಗುಂಡ್ಲುಪೇಟೆ ತಾಲೂಕಿನಲ್ಲಿ 829, ಯಳಂದೂರಿನಲ್ಲಿ 623, ಕೊಳ್ಳೇಗಾಲದಲ್ಲಿ 545 ಹಾಗೂ ಹನೂರು ತಾಲೂಕಿನಲ್ಲಿ 309 ಮತದಾರರಿದ್ದಾರೆ.
ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ ಭಾನುವಾರ ಮಧ್ಯರಾತ್ರಿ 12 ಗಂಟೆಯವರೆಗೆ ಮತದಾನ ಕೇಂದ್ರಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಚಾಮರಾಜನಗರ ತಾಲೂಕು ಕಚೇರಿಯಲ್ಲಿ 3, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು, ಹನೂರಿನಲ್ಲಿ ತಲಾ 1 ಮತಗಟ್ಟೆ ಇದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪತ್ರಕರ್ತ ನಾಗೇಶ್ ಸೋಸ್ಲೆ, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ಪತ್ರಕರ್ತೆ ಸ್ನೇಹಾ ಹಾಗೂ ಶೈಲೇಶ್ ಸ್ಪರ್ಧೆಯಲ್ಲಿದ್ದಾರೆ. ಈ ಮಧ್ಯೆ ಸ್ನೇಹಾ ತಟಸ್ಥರಾಗಿದ್ದು, ನಾಗೇಶ್ ಅವರನ್ನು ಬೆಂಬಲಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಯಾರಿಗೆ ಒಲಿಯಲಿದೆ ಪಟ್ಟ?
ಉತ್ತರಕನ್ನಡ ಕ.ಸಾ.ಪ ಜಿಲ್ಲಾಧ್ಯಕ್ಷ ಪಟ್ಟಕ್ಕಾಗಿ ಐವರು ಚುನಾವಣಾ ಕಣದಲ್ಲಿದ್ದು, ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದು ಕತೂಹಲ ಮೂಡಿಸಿದೆ.
ಜಿಲ್ಲೆಯಾದ್ಯಂತ ಆಯಾ ತಾಲೂಕು ಕಚೇರಿಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 4,747 ಮತದಾರರಿದ್ದಾರೆ. ಈ ಬಾರಿ 1500ಕ್ಕೂ ಹೆಚ್ಚು ಸದಸ್ಯರು ನೂತನವಾಗಿ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ ಅಧ್ಯಕ್ಷ ಪಟ್ಟ ಯಾರ ಪಾಲಿಗೆ ಒಲಿಯಲಿದೆ ಎಂಬುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಚುನಾವಣೆಗೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.