ಶಿವಮೊಗ್ಗ: ಕಂಠೀರವ ಅಥ್ಲೆಟಿಕ್ ಕ್ರೀಡಾಂಗಣವನ್ನು ಜೆಎಸ್ಡಬ್ಲ್ಯೂ ಫುಟ್‌ಬಾಲ್ ಸಂಸ್ಥೆ ಸುಪರ್ದಿಗೆ ನೀಡುತ್ತಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರುದ್ಧ ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸ್ಥಾಪಿತವಾದ ಕಂಠೀರವ ಕ್ರೀಡಾಂಗಣವನ್ನು ಜೆಎಸ್ಡಬ್ಲ್ಯೂ ಫುಟ್‌ಬಾಲ್ ಸಂಸ್ಥೆ ಸುಪರ್ದಿಗೆ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯವು ಇಲಾಖೆಯ ವಿರುದ್ಧವಾಗಿ ತೀರ್ಪು ನೀಡಿದ್ದು, ಇದನ್ನು ರಾಜ್ಯ ಅಥ್ಲೆಟಿಕ್ ಸಂಸ್ಥೆಗೆ ವಹಿಸಿಕೊಡಬೇಕು ಎಂದು ತಿಳಿಸಿದೆ. ಆದರೂ ಸಹ ಇದಕ್ಕೆ ಇಲಾಖೆ ಮೀನಾಮೇಷ ಎಣಿಸುತ್ತಿದೆ.
ಅಲ್ಲದೇ ಇಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಹಾಳು ಮಾಡಲಾಗಿದ್ದು, ರಾಜ್ಯ ಸರ್ಕಾರ ಇದರ ದುರಸ್ತಿಗೆ 6 ಕೋಟಿ ರೂ ಹಣ ನೀಡಿದ್ದರೂ ಈವರೆಗೂ ಸರಿಪಡಿಸಿಲ್ಲ. ಹಾಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವಿರುದ್ಧ ತನಿಖೆ ನಡೆಸಬೇಕು ಹಾಗೂ ಅಥ್ಲೆಟಿಕ್ಗಾಗಿ ಇರುವ ಕಂಠೀರವ ಕ್ರೀಡಾಂಗಣವನ್ನು ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಸುಪರ್ದಿಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.