ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆಯನ್ನು ಮಾಡಲು ಅವಕಾಶ ನೀಡಬಾರದು. ಪ್ಲಾಸ್ಟಿಕ್ ಬಳಕೆ ವಿರುದ್ಧ ನಿರಂತರ ದಾಳಿ ನಡೆಸಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಹೊಟೇಲ್‍ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಯಂತ್ರಿಸಬೇಕು. ತಮ್ಮ ಉತ್ಪನ್ನಗಳ ಪ್ಯಾಕಿಂಗ್‍ನಲ್ಲಿ ಪ್ಲಾಸ್ಟಿಕ್ ಬಳಸುವ ಎಲ್ಲಾ ಉತ್ಪಾದಕರನ್ನು ಕರೆಯಿಸಿ ಸದರಿ ಪ್ಲಾಸ್ಟಿಕ್ ವಿಲೇವಾರಿಗೆ ತಗಲುವ ವೆಚ್ಚವನ್ನು ಅವರಿಂದ ಭರಿಸಿಕೊಳ್ಳಬೇಕು ಎಂದರು.
ಮನೆ ಹಂತದಲ್ಲಿ ವಿಂಗಡಿಸದ ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ಪಡೆಯಬಾರದು. ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಭದ್ರಾವತಿ ನಗರಸಭೆಯಲ್ಲಿ ಪ್ರಸ್ತುತ 27 ಟ್ರಾಕ್ಟರ್‍ನಷ್ಟು ತ್ಯಾಜ್ಯ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವ ರೀತಿಯಲ್ಲಿ ಇತರ ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ಸಿದ್ಧವಾಗುವ ತ್ಯಾಜ್ಯಗಳಿಗೆ ಬ್ರಾಂಡ್ ರೂಪಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.