ಶಿವಮೊಗ್ಗ: ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿ ಮುಕ್ತ ಭಾರತ ಮಾಡಲು ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೆಟ್ ಜನರಲ್ ಪ್ರೊ. ರವಿವರ್ಮಕುಮಾರ್ ಮತದಾರರಿಗೆ ಕರೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿ ಆಗುತ್ತಿದೆ. ಮೋದಿಯವರು ಸರ್ವಾಧಿಕಾರಿ ಧೋರಣೆ ಮೂಲಕ ಜಾತ್ಯಾತೀತ ರಾಷ್ಟ್ರವನ್ನ ಹಿಂದೂ ರಾಷ್ಟ್ರ ಮಾಡಲು ಹೊರಟಿರುವುದು ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿರುವ ಅನಂತಕುಮಾರ್‌ಗೆ ಇನ್ನೂ ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ ಇಟ್ಟುಕೊಂಡಿರುವುದನ್ನ ನೋಡಿದರೆ ಮೋದಿಯವರೆ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೇನೋ ಎನ್ನುವ ಸಂಶಯ ಕಾಡುತ್ತದೆ. ಭಾರತ ವಿಶ್ವದಲ್ಲೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ, ಅಂತಹ ರಾಷ್ಟ್ರದ ಉಳಿವಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಚುನಾವಣೆಯನ್ನ ಗಾಂಧಿ ಪರವಾಗಿ, ಸಂವಿಧಾನದ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ದೇಶದ ಜನತೆ ತಮ್ಮ ಅಮೂಲ್ಯ ಮತವನ್ನ ನೀಡಬೇಕಾಗಿದೆ ಹೊರತು ಯಾವುದೋ ಒಬ್ಬ ವ್ಯಕ್ತಿಗಾಗಿ ಅಥವಾ ಒಂದು ಧರ್ಮಕ್ಕಾಗಿ ಮತ ಚಲಾಯಿಸಬೇಡಿ ಎಂದರು.
ಸಂವಿಧಾನದ ಸಂಸ್ಥೆಗಳ ಪಾವಿತ್ರ್ಯತೆಯನ್ನ ಸರ್ವನಾಶ ಮಾಡಿದ್ದಾರೆ, ಇವೆಲ್ಲವನ್ನ ಕಾಪಾಡಬೇಕಾದ ಚುನಾವಣಾ ಆಯೋಗವೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು, ದೇಶದ ಜನತೆ ಛೀಮಾರಿ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ಭಾರತ ಮಾಡುವ ಜೊತೆಗೆ ಸರ್ವಾಧಿಕಾರ ಕೊನೆಗೊಳಿಸುವ ಚುನಾವಣೆ ಇದಾಗಬೇಕು ಎಂದು ತಿಳಿಸಿದರು.