ಶಿವಮೊಗ್ಗ: ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಕೆರೆ ತುಂಬಿಕೊಂಡು ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಕೆರೆ ದಡದಲ್ಲಿದ್ದ ಮೂರು ಕುಟುಂಬಗಳೂ ಅಕ್ಷರಶಃ ಜಲದಿಗ್ಭಂದನ ಎದುರಿಸುತ್ತಿವೆ. ಗುಡ್ಡದಿಂದ ಹರಿದು ಬರುವ ನೀರಿಗೆ ಕಾಲುವೆ ನಿರ್ಮಾಣ ಮಾಡಿ, ಆ ನೀರನ್ನ ಕುಂಚೇನಹಳ್ಳಿಗೆ ತಿರುಗಿಸಿ ನೀರು ಸದಾ ಕಾಲ ಕೆರೆಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ, ಜುಲೈ ತಿಂಗಳ ಮಳೆಗೇ ಕೆರೆ ತುಂಬಿಕೊಂಡಿದ್ದು, ಈಗ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಸೃಷ್ಟಿಸಿದೆ.
ಸಣ್ಣ ನೀರಾವರಿ ಇಲಾಖೆ ಇಲ್ಲಿ ಕಾಮಗಾರಿ ನಡೆಸಿದ್ದು, ಕೆರೆಗೆ ಎರಡು ಟ್ಯೂಬ್ಗಳನ್ನ ಅಳವಡಿಸಲಾಗಿದೆ. ಒಂದು ಟ್ಯೂಬ್ ಶಾಶ್ವತವಾಗಿ ಬಂದ್ ಆಗಿದೆ. ಇನ್ನೊಂದನ್ನ ತೆಗೆದರೆ ಕೆಳ ಭಾಗದಲ್ಲಿನ ಜಮೀನುಗಳಿಗೆ ನೀರು ನುಗ್ಗುತ್ತದೆ. ಈಗಾಗಾಲೇ ಕೆರೆ ಮೇಲಿನ ಜಮೀನು ಜಲಾವೃತವಾಗಿವೆ. ದಡದ ಮೇಲೆ ಇರುವ ಸೇವಾಲಾಲ್ ಶನೇಶ್ವರ ಮಠಕ್ಕೂ ಸಹ ಭಕ್ತರ ಸಂಪರ್ಕ ಕಡಿತಗೊಂಡಿದೆ.
ಇಲ್ಲಿನ ಮೂರು ಮನೆಗಳು ಕುಸಿಯುವ ಸ್ಥಿತಿಯಲ್ಲಿದ್ದು, ಇಲ್ಲಿ ತನಕ ಯಾವುದೇ ಅಧಿಕಾರಿಗಳೂ ಸಹ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜೊತೆಗೆ ಸ್ಥಳೀಯ ಶಾಸಕ ಕೆ ಬಿ ಅಶೋಕ್ ನಾಯ್ಕ್ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ರಾತ್ರಿಯಿಡಿ ಭಯದಲ್ಲೇ ಕಾಲ ಕಳೆಯುವ ಈ ಕುಟುಂಬಗಳು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಾಗುವ ಹೆದ್ದಾರಿಯಲ್ಲಿ ಕುಂಚೇನಹಳ್ಳಿ ಗ್ರಾಮ ಸಿಗುತ್ತದೆ. ಈ ಹಳ್ಳಿಯ ಮಧ್ಯೆ ಬೃಹತ್ ಕೆರೆ ಇದ್ದು ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಎತ್ತಲೂ ಸಾಗದೇ ಜನದಿಗ್ಭಂದನ ಹೇರಿದಂತಾಗಿದೆ. ಈ ಭಾಗದ ಜನರಿಗೆ ವರವಾಗಬೇಕಿದ್ದ ಕೆರೆ ದಿಂಬದ ಜನರಿಗೆ ಸಂಕಷ್ಟ ತಂದಿದೆ. ಟ್ಯೂಬಿನ ಮೂಲಕವೂ ನೀರು ಸಾಗುತ್ತಿಲ್ಲ. ಅತ್ತ ಕಾಡಿನಿಂದಲೂ ನೀರು ಬರುವುದನ್ನ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿ ಸಿಲುಕಿರುವ ಜನರು ಹಿಡಿಶಾಪ ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶನೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಾಗರಾಜ್, ಬಿಜೆಪಿ ಶಾಸಕ ಅಶೋಕ್ ನಾಯ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದ ಜನರು ರಾತ್ರಿ ನಿದ್ದೆ ಮಾಡುತ್ತಿಲ್ಲ. ಮನೆ ಕುಸಿಯುವ ಹಂತದಲ್ಲಿದೆ, ಯಾರೂ ಇತ್ತ ಸುಳಿದಿಲ್ಲ. ನಾವು ಸತ್ತರೆ ಹಾರ ಹಾಕೋದಕ್ಕೆ ಬರ್ತಾರೆ. ಆದರೆ, ಇಂತಹ ಸಮಯದಲ್ಲಿ ಬರೋದಿಲ್ಲ. ರಸ್ತೆ ಸಂಪರ್ಕಗಳೂ ಕಡಿತಗೊಂಡಿವೆ. ದನಕರುಗಳು ಮನೆಗಳಿಗೆ ತೆರಳಲು ಸಾಧ್ಯವಾಗ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ಬಾಗಲಕೋಟೆ: ಧಾರಾಕಾರ ಮಳೆಗೆ ಕೊಚ್ಚಿ ಹೋದ ಸೂರ್ಯಕಾಂತಿ ಬೆಳೆ