ಶಿವಮೊಗ್ಗ: ಬರೋಬ್ಬರಿ 33 ಮಂಗಗಳಿಗೆ ವಿಷ ಪ್ರಾಸನ ಮಾಡಿ ಕೊಂದಿರುವ ಘಟನೆ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲ್ಯಾವಿಗೆರೆಯ ಅಭಿಷೇಕ್, ಲಂಬೂದರ, ತ್ಯಾಗರ್ತಿಯ ದಸ್ತಗಿರ್, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳು. ಈ ಐವರು 36 ಮಂಗಗಳಿಗೆ ವಿಷ ಉಣಿಸಿ ತ್ಯಾಗರ್ತಿ ಸಮೀಪದ ಲ್ಯಾವಿಗೆರೆಯಿಂದ ಸಾಗರದ ನೇದರವಳ್ಳಿ ಬಳಿಯ ಕಾಡಿಗೆ ಬಿಸಾಡಲು ಹೊರಟಿದ್ದರು.
ಈ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದಾಗ ಉತ್ತರಿಸಲಾಗದೇ ತಡಬಡಾಯಿಸಿದ್ದು, ನಂತರ ಮಂಗಗಳಿಗೆ ವಿಷ ಹಾಕಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. 36 ಮಂಗಗಳ ಪೈಕಿ 33 ಸಾವನ್ನಪ್ಪಿದ್ದು, 3 ಮಂಗಗಳು ಅಸ್ವಸ್ಥಗೊಂಡಿವೆ.
ವನ್ಯಜೀವಿ ವೈದ್ಯ ಡಾ.ವಿನಯ್ ಅವರ ನೇತೃತ್ವದಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಸ್ವಸ್ಥಗೊಂಡ 3 ಮಂಗಗಳಿಗ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತರಿಂದ ಒಂದು ಆಡಿ ಕಾರು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಾಗರ ವನ್ಯಜೀವಿ ವಿಭಾಗದ ಡಿಎಫ್ಒ ಮೋಹನ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.