ಶಿವಮೊಗ್ಗ : ಪ್ರಧಾನಮಂತ್ರಿ ಡಿಜಿಟಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂ ಭಾಗವಾದ ಶರಾವತಿ ಹಿನ್ನೀರು ಪ್ರದೇಶದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಈಗಾಗಲೆ 'ನೋ ನೆಟ್‍ವರ್ಕ್, ನೋ ವೋಟಿಂಗ್' ಎಂಬ ಅಭಿಯಾನ ಶುರುವಾಗಿದೆ. ಅಭಿಯಾನಕ್ಕೆ ಭಾರೀ ಬೆಂಬಲವು ವ್ಯಕ್ತವಾಗುತ್ತಿದೆ. ಚುನಾವಣಾ ಸಿದ್ಧತೆ ಮತ್ತು ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ಅಲ್ಲದೆ ಅಭಿಯಾನದ ಭಾಗವಾಗಿ 'ಕಟ್ಟಿನಕಾರು ಕಾರಣಿ ನೆಟ್‍ವರ್ಕ್ ಹೋರಾಟ ಸಮಿತಿ' ಅಸ್ತಿತ್ವಕ್ಕೆ ಬಂದಿದೆ.
ಸಾಗರ ತಾಲೂಕಿನ ಕುದರೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಬಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯತ್‌ಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿವೆ. ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಅದರಲ್ಲೂ ಮಳೆಗಾಲದಲ್ಲಿ ನೆಟ್‌ವರ್ಕ್ ಇಲ್ಲದೇ ಜನರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. 5ಜಿ ಬಗ್ಗೆ ಮಾತನಾಡುವ ಸರ್ಕಾರಗಳು ಈ ಗ್ರಾಮಗಳಿಗೆ 2ಜಿ ನೆಟ್‌ವರ್ಕ್ ಸಹ ಒದಗಿಸಲು ವಿಫಲವಾಗಿವೆ.
ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ವೇಳೆ ಉದ್ಯೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯರು ನೆಟ್‍ವರ್ಕ್ ನೀಡುವಂತೆ ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆದಿದ್ದಾಯ್ತು, ಜನಪ್ರತಿನಿಧಿಗಳಿಗೆ ಬೇಡಿದ್ದಾಯ್ತು. ಪ್ರಯೋಜನವಾಗದ ಹಿನ್ನೆಲೆ, ‘ನೋ ನೆಟ್‍ವರ್ಕ್, ನೋ ವೋಟಿಂಗ್' ಅಭಿಯಾನ ಪ್ರಾರಂಭ ಮಾಡಿದ್ದಾರೆ.
ಗುಡ್ಡ, ಬೆಟ್ಟ ಹತ್ತಿದರೂ ನೆಟ್‌ವರ್ಕ್ ಇಲ್ಲ
ಆನ್‍ಲೈನ್ ಶಿಕ್ಷಣಕ್ಕೆ ಒತ್ತು ಕೊಡುವ ಸರ್ಕಾರ ನೆಟ್‍ವರ್ಕ್ ಸಮಸ್ಯೆ ಬಗೆಹರಿಸದೆ ಇರುವುದು ದುರಾದೃಷ್ಟಕರ. ರಾಜ್ಯದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮಕ್ಕಳು ನೆಟ್‍ವರ್ಕ್ ಸಿಗದೇ ಪರದಾಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ವರ್ಕ್ ಫ್ರಂ ಹೋಂ ಮಾಡುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಫೋನ್ ಕರೆ ಮಾಡಬೇಕು ಎಂದರೂ ಗುಡ್ಡ, ಬೆಟ್ಟ ಹತ್ತಿ ಹೋಗಬೇಕು. ಅಲ್ಲಿ ಒಂದು ಪಾಯಿಂಟ್ ನೆಟ್‍ವರ್ಕ್ ಸಿಕ್ಕರೆ ಅದೃಷ್ಟ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.