ಶಿವಮೊಗ್ಗ : ಸಿಎಂ ಬಿಎಸ್ವೈ ಆಡಳಿತಕ್ಕೆ ರಾಜ್ಯದ ಜನರು ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಹೊಂದಿಕೊಂಡು ಹೋಗೊಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಖಾತೆ ಬಗ್ಗೆ ಅಸಮಾಧಾನಗೊಂಡಿರುವ ಸಚಿವರಲ್ಲಿ ಮನವಿ ಮಾಡಿದರು.
ಖಾತೆ ಹಂಚಿಕೆ ಗೊಂದಲದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಪೂರ್ಣ ಬಹುಮತ ನೀಡಿದ್ದರೆ, ಇಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ.
ಬೇರೆ ಪಕ್ಷದಿಂದ ಬಂದವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಚುನಾವಣೆ ನಡೆಸಿ, ಮಂತ್ರಿ ಮಾಡುವ ಸಮಸ್ಯೆ ಇರುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
ಖಾತೆ ಬಗ್ಗೆ ಪ್ರಶ್ನೆ ಇಲ್ಲ, ಮಂತ್ರಿ ಮಾಡಲೇಬೇಕು ಎಂದು ಕೇಳುವುದಿಲ್ಲ ಎಂದು ಹೇಳಿ, ಗೆದ್ದ ನಂತರ ಮುಖ್ಯಮಂತ್ರಿಗಳನ್ನ ಸಾಕಷ್ಟು ಹೊಗಳಿ ವರ್ಣನೆ ಮಾಡಿದರು. ಈಗ ಖಾತೆ ಸಿಗದೆ ಇದ್ದಾಗ ಅವರು ಬಳಸುತ್ತಿರುವ ಪದಗಳು ಹೇಗಿವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರು ನಿಬಾಯಿಸಿಕೊಂಡು ಹೋಗುತ್ತೇವೆ ಎಂದಿದ್ದರು. ಹಾಗಾಗಿ, ರಾಜ್ಯದ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಗೊಂದಲ ಮಾಡುವುದು ಒಳ್ಳೆಯದಲ್ಲ. ಹೊಂದಿಕೊಂಡು ಹೋಗೊಣ. ನನಗೆ ಸ್ವಲ್ಪ ಸಮಸ್ಯೆಯಾಗುತ್ತೆ ಎಂದು ಬಹಿರಂಗ ಹೇಳಿಕೆ ನೀಡುವುದು ಪಕ್ಷಕ್ಕೂ ನಿಮಗೂ ಒಳ್ಳೆಯದಲ್ಲ ಎಂದರು.
ಓದಿ-ನಾಮಕರಣದ ಊಟ ತಿಂದು ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..
ಒಂದು ಇಲಾಖೆಯನ್ನು ಎರಡು ಮಾಡಲು ಬರುವುದಿಲ್ಲ : ಒಂದೊಂದು ಇಲಾಖೆಯನ್ನು ಎರಡು ಮಾಡಲು ಬರುವುದಿಲ್ಲ. ಎಲ್ಲವೂ ನಮಗೆ ಬೇಕು ಎಂದು ಹೇಳುವುದು ಸರಿಯಲ್ಲ. ಹಾಗಾಗಿ, ಇನ್ನೂ ಎರಡೂವರೆ ವರ್ಷ ಇದೆ, ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗೋಣ. ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮೊದಲು ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಿ : ಈಗಿರುವುದು ಕಾಂಗ್ರೆಸ್-ಬಿಜೆಪಿಮೈತ್ರಿ ಸರ್ಕಾರ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ಸರ್ವಾಧಿಕಾರದ ಧೋರಣೆ ಹಾಗೂ ಭ್ರಷ್ಟಾಚಾರದ ಪಕ್ಷ ಎಂದು ತಿರಸ್ಕರಿಸಿ, ನಮ್ಮ ಪಕ್ಷಕ್ಕೆ ನಿಮ್ಮ ಶಾಸಕರು ಬಂದಿದ್ದಾರೆ. ಹಾಗಾಗಿ, ಡಿಕೆಶಿ ದಿನಕ್ಕೊಂದು ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.
ಕಾಂಗ್ರೆಸ್ ರಾಜ್ಯದಲ್ಲಿ ಮುಳುಗುತ್ತಿರುವ ಹಡುಗು. ಈಗಲೂ ಬಿಜೆಪಿಗೆ ಸೇರಿಕೊಳ್ಳಲು ಆಫರ್ ನೀಡಿದ್ರೆ ಕಾಂಗ್ರೆಸ್ನಿಂದ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ದಿನೇದಿನೆ ಕ್ಷೀಣಿಸುತ್ತಿದೆ. ಹಾಗಾಗಿ, ಕಾಂಗ್ರೆಸ್ ಉಳಿಸಿಕೊಳ್ಳುವ ಪ್ರಯತ್ನವನ್ನು ಡಿ ಕೆ ಶಿವಕುಮಾರ್ ಅವರು ಮಾಡಲಿ ಎಂದು ಸಲಹೆ ನೀಡಿದರು.