ಶಿವಮೊಗ್ಗ: ಜಿಲ್ಲೆಯ ಹೊರವಲಯದಲ್ಲಿರುವ ಹುಲಿ-ಸಿಂಹಧಾಮದ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು, ಇಲ್ಲಿನ 120 ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸಫಾರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು, ಪಕ್ಷಿ, ಪ್ರಾಣಿಗಳಿಗಾಗಿ ವಿದೇಶದಲ್ಲಿ ಇರುವ ಹಾಗೆ ಗಾಜಿನ ಪಂಜರವನ್ನು ತಯಾರು ಮಾಡಲಾಗುತ್ತಿದೆ. ಸುಮಾರು 35 ಗಾಜಿನ ಪಂಜರಗಳನ್ನು ರೆಡಿ ಮಾಡಲಾಗುತ್ತಿದೆ. ಇದರಿಂದಾಗಿ ಅವುಗಳಿಗೆ ಕಾಡಿನ ಅನುಭವ ಸಿಗುತ್ತದೆ ಎಂದರು.
ಈಗಾಗಲೇ ಹುಲಿ ಮತ್ತು ಸಿಂಹಧಾಮವನ್ನು ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರ ಅಭಿವೃದ್ಧಿಗೆ ಮೃಗಾಲಯ ಪ್ರಾಧಿಕಾರ 5 ಕೋಟಿ ರೂ. ನೀಡಲಿದೆ. ರಾಜ್ಯ ಸರ್ಕಾರ 5 ಕೋಟಿ ನೀಡಿದೆ. ಅದೇ ರೀತಿ ಮೈಸೂರು ಮೃಗಾಲಯದಿಂದ 2 ಕೋಟಿ ರೂ. ಸೇರಿದಂತೆ ಒಟ್ಟು 12 ಕೋಟಿ ರೂ.ನಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ರಾಜ್ಯದ ಪ್ರಥಮ ಕಾಡೆಮ್ಮೆ ಸಫಾರಿ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಪ್ರಾಣಿ-ಪಕ್ಷಿಗಳನ್ನು ತರಲಾಗುವುದು ಎಂದು ಸಂಸದರು ತಿಳಿಸಿದರು.
ನಂತರ ಮಾತನಾಡಿದ ಹುಲಿ-ಸಿಂಹಧಾಮದ ಸಿಇಒ, ಇಲ್ಲಿನ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಕಾಡೆಮ್ಮ ಸಫಾರಿ ಕಾಮಗಾರಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮುಕ್ತಾಯವಾಗಲಿದೆ ಎಂದರು.