ಶಿವಮೊಗ್ಗ: ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥವನ್ನು ತಲಕಾವೇರಿ ಮಾದರಿಯಲ್ಲಿ ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬುತೀರ್ಥದ ಅಭಿವೃದ್ಧಿ ಕಾರ್ಯಕ್ಕೆ ನಾಳೆ ಚಾಲನೆ ನೀಡಲಾಗುವುದು. ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗಿದೆ ಎಂದರು.
ಇಲ್ಲಿ ಪುಷ್ಕರಣಿಯನ್ನು ಅಭಿವೃದ್ಧಿಪಡಿಸುವುದು. ನದಿಗೆ ತಡೆಗೋಡೆ ನಿರ್ಮಾಣ, ಗ್ರಾಮದ ಬಳಿಯ ಕೆರೆ ಅಭಿವೃದ್ಧಿ ಮಾಡುವುದು, ಅಂಬುತೀರ್ಥಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಜೊತೆಗೆ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೇವಲ ಸರ್ಕಾರವಷ್ಟೇ ಅಲ್ಲದೆ ಗ್ರಾಮಸ್ಥರು ಸಹ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಇದರಿಂದ ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಆರಗ ಜ್ಞಾನೇಂದ್ರ ಆಗಮಿಸಲಿದ್ದಾರೆ ಎಂದರು.
ಶರಾವತಿ ನದಿ ಹುಟ್ಟಿನ ಹಿನ್ನೆಲೆ: ಶರಾವತಿ ನದಿ ತೀರ್ಥಹಳ್ಳಿ ತಾಲೂಕು ಅಂಬುತೀರ್ಥದಲ್ಲಿ ಹುಟ್ಟುತ್ತದೆ. ಶ್ರೀರಾಮ ವನವಾಸಕ್ಕೆ ಬಂದಾಗ ಸೀತೆಗೆ ಬಾಯಾರಿದೆ ಎಂದು ನೆಲಕ್ಕೆ ಬಾಣ ಬಿಟ್ಟು ನೀರು ಬರುವಂತೆ ಮಾಡುತ್ತಾನೆ. ಅದೇ ಶರಾವತಿ ನದಿಯಾಗಿ ಹುಟ್ಟಿ ಹರಿಯುತ್ತಿದೆ. ಇದರಿಂದ ಶರಾವತಿ ನದಿ ಎಂದು ಕರೆಯುತ್ತಾರೆ.