ಶಿವಮೊಗ್ಗ: ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ಪ್ರಾಸ್ತಾವಿಕ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರಿಂದ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯ ನಂತರ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಇದೊಂದು ಅವೈಜ್ಞಾನಿಕ ಯೋಜನೆ. ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದು ಅವಿವೇಕದ ಪರಮಾವಧಿ ಹಾಗೂ ಮೂರ್ಖ ತನದ ಕೆಲಸ. ಬೆಂಗಳೂರು ವಕ್ರ ವಕ್ರವಾಗಿ ಬೆಳೆಯುತ್ತಿರುವುದನ್ನು ತಡೆಯಬೇಕು. ಹಾಗೂ ಕೇವಲ ಬೆಂಗಳೂರು ಅಭಿವೃದ್ಧಿ ಪಡಿಸುವುದಷ್ಟೆ ಅಲ್ಲ, ರಾಜ್ಯದ ಎಲ್ಲಾ ಭಾಗಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಸ್ಥಳೀಯವಾಗಿ ದೊರೆಯುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೆರೆ, ಕಟ್ಟೆ ಉಳಿಸಿ, ಅಂತರ್ಜಲ ರಕ್ಷಣೆ ಮಾಡಬೇಕು. ಲಿಂಗನಮಕ್ಕಿ, ಭದ್ರಾ, ತುಂಗಭದ್ರ ಡ್ಯಾಂ ಗಳಿಂದ ನೀರನ್ನು ತೆಗೆದುಕೊಂಡು ಹೋಗುವ ಆಲೋಚನೆಯನ್ನು ಮೊದಲು ಕೈ ಬಿಡಬೇಕು ಎಂದರು.
ಈ ವೇಳೆ ಸಭೆಯಲ್ಲಿ ಹಿರಿಯ ಸಾಮಾಜಿಕ ಹಾಗೂ ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ, ಟಿ.ಎಂ ಚಂದ್ರಪ್ಪ , ಕೆ.ರಾಘವೇಂದ್ರ, ಪಿ.ಶೇಖರಪ್ಪ ಇನ್ನಿತರರು ಉಪಸ್ಥಿತರಿದ್ದರು.